ಹರಿಹರ: ಪ್ರಾಮಾಣಿಕ ಹೋರಾಟಗಾರರಿಂದ ಮಾತ್ರ ರೈತ ಸಂಘಟನೆ ಪ್ರಬಲವಾಗುತ್ತದೆ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯ ಉಪಾಧ್ಯಕ್ಷ ತೇಜಸ್ವಿ ಪಟೇಲ್ ಹೇಳಿದರು.
ನಗರದ ಎಪಿಎಂಸಿ ಆವರಣದ ರೈತ ಸಮುದಾಯ ಭವನದಲ್ಲಿ ಆಯೋಜಿಸಿದ್ದ ರೈತ ಸಂಘದ ರಾಜ್ಯ ಉಪಾಧ್ಯಕ್ಷರಾಗಿದ್ದ ದಿ.ವಾಸನದ ಓಂಕಾರಪ್ಪ ಅವರ ಸ್ಮರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರೈತ ಸಂಘಟನೆಗಳ ಬಲಯುತವಾದರೆ ಮಾತ್ರ ರೈತ ಸಮುದಾಯದ ಮೇಲಿನ ಶೋಷಣೆ ತಡೆಯಲು ಸಾಧ್ಯ. ತಾಲೂಕು ಹಾಗೂ ಜಿಲ್ಲೆಯಲ್ಲಿ ರೈತ ಸಂಘಟನೆಗಾಗಿ ಓಂಕಾರಪ್ಪ ಅವರು ಎರಡು ದಶಕದ ಕಾಲ ಸತತ ಹೋರಾಟ ಮಾಡಿದ್ದಾರೆ. ಭದ್ರಾ ಸಕ್ಕರೆ ಕಾರ್ಖಾನೆ ಮರು ಆರಂಭ, ಕರೂರು ಭೂಸ್ವಾಧೀನ ರೈತರಿಗೆ ಪರಿಹಾರ ಕೊಡಿಸುವುದು ಸೇರಿದಂತೆ ಹತ್ತಾರು ಹೋರಾಟಗಳಿಗೆ ಅವರು ಬಲ ನೀಡಿದರು ಎಂದರು.
ಈಗಿನ ಸರ್ಕಾರಗಳು ರೈತ ವಿರೋಧಿ ಕಾಯ್ದೆಗಳನ್ನು ಜಾರಿ ಮಾಡುತ್ತಿವೆ. ಪ್ರಬಲವಾಗಿ ಹೋರಾಟ ರೂಪಿಸುವ ಮೂಲಕ ಇದು ಜಾರಿಯಾಗದಂತೆ ನೋಡಿಕೊಳ್ಳಬೇಕಿದೆ. ರೈತ ಸಂಘಟನೆ ಶಕ್ತಿ ವರ್ಧನೆಯಾದರೆ ಸರ್ಕಾರವು ರೈತ ವಿರೋಧಿ ಕಾಯ್ದೆ ಜಾರಿಗೆ ಯೋಚಿಸುತ್ತದೆ ಎಂದರು.
ಈ ವೇಳೆ, ರೈತ ಸಂಘದ ರಾಜ್ಯ ಉಪಾಧ್ಯಕ್ಷ ಅರುಣ್ ಕುಮಾರ್ ಕುರುಡಿ, ಜಿಲ್ಲಾಧ್ಯಕ್ಷ ಪ್ರಭುಗೌಡ ಕೆ.ಎನ್. ಹಳ್ಳಿ, ಲಕ್ಷ್ಮಣ್, ಕುಣೆಬೆಳೆಕೆರೆ ಉಮೇಶ್, ದೊಗ್ಗಳ್ಳಿ ಮಹೇಶ್ವರಪ್ಪ, ಸಿದ್ದಪ್ಪ, ಹೊನ್ನಾಳಿ ನರಸಿಂಹಪ್ಪ, ಶಭುಲಿಂಗಪ್ಪ, ಹೊನ್ನಾಳಿ ಜಗದೀಶ್, ವೀರಭದ್ರಪ್ಪ, ಎನ್.ಬಸಪ್ಪ, ಬಸಣ್ಣ ಗುತ್ತೂರು, ಕರಿಬಸಮ್ಮ ಕಮಲಾಪುರ, ಗಿರಿಜಮ್ಮ, ನಂದೀಶ್, ಪಾಮೇನಹಳ್ಳಿ ಮಾರುತಿರಾವ್ ಇತರರಿದ್ದರು.