ದಾವಣಗೆರೆ/ಶಿವಮೊಗ್ಗ: ಜಿಲ್ಲೆಯಲ್ಲಿ ಮಳೆ ಮುಂದುವರೆದಿದೆ. ನಿರಂತರ ಮಳೆ ಬೀಳುತ್ತಿರುವ ಬೆನ್ನಲ್ಲೇ ಮನೆ ಕುಸಿದ ಪರಿಣಾಮ ವೃದ್ಧ ದಂಪತಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಜಿಲ್ಲೆಯ ಜಗಳೂರು ತಾಲೂಕಿನ ಮುಸ್ಟೂರ್ ಗ್ರಾಮದಲ್ಲಿ ತಡ ರಾತ್ರಿ ಜರುಗಿದೆ. ನಿಂಗಪ್ಪ (60) ಮತ್ತು ಕೆಂಚಮ್ಮ (55) ಗಾಯಗೊಂಡಿರುವ ದಂಪತಿ. ಮನೆಯಲ್ಲಿ ಗಾಢ ನಿದ್ರೆಯಲ್ಲಿ ಮಲಗಿದ್ದ ವೇಳೆ ಮನೆ ಗೋಡೆ ಕುಸಿದಿದ್ದು, ಬಡಪಾಯಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮನೆಯ ಮಾಳಿಗೆ ಕುಸಿದಿದ್ದರಿಂದ ಭಾರಿ ಅನಾಹುತ ತಪ್ಪಿದ್ದು, ಸ್ಥಳೀಯರ ಸಹಕಾರದಿಂದ ಗಾಯಾಳು ದಂಪತಿಯನ್ನು ತುರ್ತಾಗಿ ಚಿಕಿತ್ಸೆಗಾಗಿ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು, ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಜಗಳೂರು ತಹಶೀಲ್ದಾರ್ ಸಂತೋಷ್ ಪರಿಶೀಲನೆ ನಡೆಸಿದರು. ಜಗಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬೀಳುವ ಹಂತಕ್ಕೆ ತಲುಪಿರುವ ಮನೆಗಳಲ್ಲಿ ಯಾರೂ ವಾಸ ಮಾಡಬಾರದು ಎಂದು ತಹಶೀಲ್ದಾರ್ ಸಂತೋಷ್ ಅವರು ಜನರಿಗೆ ಸಂದೇಶ ರವಾನಿಸಿದ್ದಾರೆ.
ಮಲವಗೊಪ್ಪದಲ್ಲಿ ಮಳೆಗೆ ಮನೆಗೋಡೆ ಕುಸಿದು ವೃದ್ದೆ ಸಾವು.. ಮತ್ತೊಂದೆಡೆ ಶಿವಮೊಗ್ಗದಲ್ಲಿ ಮನೆ ಗೋಡೆ ಕುಸಿದು ವೃದ್ಧೆಯೊಬ್ಬರು ಮೃತಪಟ್ಟಿರುವ ಘಟನೆ ಹೊರ ವಲಯದ ಮಲವಗೊಪ್ಪದ ಇಂದಿರಾ ಕಾಲೋನಿಯಲ್ಲಿ ನಡೆದಿದೆ. ಗೌರಮ್ಮ(75) ಮೃತ ವೃದ್ಧೆ ಎಂದು ತಿಳಿದುಬಂದಿದೆ.
ಕಳೆದ ಹಲವು ದಿನಗಳಿಂದ ಮಳೆ ಸುರಿಯುತ್ತಿದ್ದು, ಇದರಿಂದ ಮನೆ ಶಿಥಿಲವಾಗಿತ್ತು. ಸೋಮವಾರ ಸಂಜೆ ಏಕಾಏಕಿ ಮನೆಯ ಗೋಡೆ ಕುಸಿತವಾಗಿದೆ. ಈ ವೇಳೆ ವೃದ್ಧೆ ಗೌರಮ್ಮ ಮಲಗಿದ್ದು, ಅವರ ಮೇಲೆಯೇ ಗೋಡೆ ಬಿದ್ದಿದೆ.
ತಕ್ಷಣ ಸ್ಥಳೀಯರು ವೃದ್ದೆಯನ್ನು ಆಸ್ಪತ್ರೆಗೆ ಕಳುಹಿಸಿದ್ದರು. ಆದರೆ, ವೃದ್ಧೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ವೃದ್ಧೆಗೆ ನಾಲ್ವರು ಮಕ್ಕಳಿದ್ದು, ಯಾರೂ ಸಹ ಆಕೆಯ ಜೊತೆಗೆ ಇರಲಿಲ್ಲ ಎನ್ನಲಾಗ್ತಿದೆ. ಸ್ಥಳಕ್ಕೆ ತಹಶೀಲ್ದಾರ್ ನಾಗರಾಜ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.