ದಾವಣಗೆರೆ: ಬೆಣ್ಣೆನಗರಿಯಲ್ಲಿ ಒಟ್ಟಾರೆ 32 ಕೊರೊನಾ ಪಾಸಿಟಿವ್ ಪ್ರಕರಣ ಕಂಡುಬಂದಿದ್ದು, ಭಾನುವಾರ ಮಹಿಳೆಯೋರ್ವರು ಮೃತಪಟ್ಟಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ಎರಡಕ್ಕೇರಿದೆ. ಇದರಿಂದಾಗಿ ದಾವಣಗೆರೆ ಜನರು ಆತಂಕದಿಂದ ಬದುಕುವಂತಾಗಿದೆ.
ಬಾಷಾನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದ 533 ಸೋಂಕಿತ ಮಹಿಳೆಯಿಂದ 19 ಜನರಿಗೆ ಸೋಂಕು ತಗುಲಿರುವುದು ಆತಂಕ ಹೆಚ್ಚುವಂತೆ ಮಾಡಿದೆ. ಮಾತ್ರವಲ್ಲ, ಈ ಮಹಿಳೆ ಎರಡನೇ ಸಂಪರ್ಕದಲ್ಲಿದ್ದ ಮಹಿಳೆಯನ್ನು ಕೊರೊನಾ ಬಲಿ ತೆಗೆದುಕೊಂಡಿದೆ.
ರೋಗಿ 533 ಪಿಹೆಚ್ಸಿ ಕೇಂದ್ರದ ನರ್ಸ್ ದ್ವಿತೀಯ ಸಂಪರ್ಕ ಹೊಂದಿದ್ದ ಮಹಿಳೆಯ ಸಾವು ಮತ್ತಷ್ಟು ಭಯ ಹುಟ್ಟಿಸಿದೆ. ರೋಗಿ 651 ಸಂಖ್ಯೆಯ 48 ವರ್ಷದ ಮಹಿಳೆ ಹೈಪರ್ ಟೆನ್ಷನ್, ಡಯಾಬಿಟಿಸ್, ಉಸಿರಾಟದ ತೊಂದರೆ ಎಂದು ಮೇ.1 ರಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಇವರು SARI ನಿಂದ ಮೃತಪಟ್ಟಿದ್ದಾರೆ.
ನರ್ಸ್ನಿಂದ ಒಟ್ಟು 19 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ವೃದ್ಧನ ಹಾಗೂ ಮಹಿಳೆಯ ಟ್ರಾವೆಲ್ ಹಿಸ್ಟರಿ ನಿಗೂಢವಾಗಿದೆ. ಇದನ್ನು ಪತ್ತೆ ಹಚ್ಚಲು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೆ ಸಾಧ್ಯವಾಗಿಲ್ಲ. ಮೇ.1 ರಂದು 69 ವರ್ಷದ ವೃದ್ಧ ಸಾವನ್ನಪ್ಪಿದ್ದರೂ ಸೋಂಕಿನ ಮೂಲ ಸ್ಪಷ್ಟವಾಗಿ ಗೊತ್ತಾಗಿಲ್ಲ.