ದಾವಣಗೆರೆ : ಕೆಎಸ್ಆರ್ಟಿಸಿ ಬಸ್ ಚಾಲಕನ ಸಮವಸ್ತ್ರ ಧರಿಸಿ ಹೊನ್ನಾಳಿ ಶಾಸಕ ಎಂ. ಪಿ. ರೇಣುಕಾಚಾರ್ಯ ಚಾಲನೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊನ್ನಾಳಿ ಡಿಪೋ ಮ್ಯಾನೇಜರ್ಗೆ ನೊಟೀಸ್ ಜಾರಿ ಮಾಡಲಾಗಿದೆ.
ಹೊನ್ನಾಳಿ ಡಿಪೋ ಮ್ಯಾನೇಜರ್ ಮಹೇಶಪ್ಪ ಅವರಿಗೆ ನಿಗಮದ ಶಿವಮೊಗ್ಗ ವಿಭಾಗೀಯ ನಿಯಂತ್ರಣಾಧಿಕಾರಿ ಟಿ.ಆರ್.ನವೀನ್ ಕುಮಾರ್ ಅವರು ಪ್ರಕರಣದ ಬಗ್ಗೆ ವಿವರಣೆ ನೀಡುವಂತೆ ಹಾಗೂ ಯಾರ ಅನುಮತಿ ಪಡೆದು ಬಸ್ ಚಾಲನೆ ಮಾಡಲು ಶಾಸಕರಿಗೆ ಅನುಮತಿ ನೀಡಲಾಯಿತು ಎಂದು ನೊಟೀಸ್ನಲ್ಲಿ ಉತ್ತರ ಕೇಳಿದ್ದಾರೆ ಎಂದು ನಿಗಮದ ಮೂಲಗಳು ತಿಳಿಸಿವೆ.
ಗ್ರಾಮೀಣ ಪ್ರದೇಶಗಳಿಗೆ ಸಾರಿಗೆ ಬಸ್ಗಳ ಸೌಲಭ್ಯ ನೀಡುವ ಸಲುವಾಗಿ ಬಸ್ಗೆ ಚಾಲನೆ ನೀಡಿದ ಬಳಿಕ ರೇಣುಕಾಚಾರ್ಯ ಸುಮಾರು 60 ಕಿ.ಮೀವರೆಗೆ ಕೆಎಸ್ಆರ್ಟಿಸಿ ಬಸ್ ಚಾಲನೆ ಮಾಡಿದ್ದರು. ಈ ವಿಚಾರವನ್ನು ಶಾಸಕರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಫೋಟೋ ಹಾಕುವ ಮೂಲಕ ಹಂಚಿಕೊಂಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಪರ - ವಿರೋಧವೂ ವ್ಯಕ್ತವಾಗಿತ್ತು.
ಹೊನ್ನಾಳಿ ಖಾಸಗಿ ಬಸ್ ನಿಲ್ದಾಣದಿಂದ ಗೊಲ್ಲರಹಳ್ಳಿ, ಬೆನಕನಹಳ್ಳಿ, ಉಜ್ಜನೀಪುರ, ಹೊಟ್ಟಾಪುರ, ಬೀರಗೊಂಡನಹಳ್ಳಿ, ರಾಂಪುರ, ಸಾಸ್ವೆಹಳ್ಳಿ ಗ್ರಾಮಗಳಿಗೆ ತೆರಳಿ ಮತ್ತೆ ಇದೇ ಗ್ರಾಮಗಳ ಮೂಲಕ ಹೊನ್ನಾಳಿಗೆ ಬಸ್ ಚಲಾಯಿಸಿಕೊಂಡು ರೇಣುಕಾಚಾರ್ಯ ಬಂದಿದ್ದರು. ಸಂಜೆ ಪುನಃ ಹೊನ್ನಾಳಿ ಬಸ್ ನಿಲ್ದಾಣದಿಂದ ಸೊರಟೂರು, ರಾಮೇಶ್ವರ, ನ್ಯಾಮತಿ ಸೇರಿದಂತೆ ವಿವಿಧ ಗ್ರಾಮಗಳ ಮೂಲಕ ಶಿವಮೊಗ್ಗ ತಲುಪಿದ್ದರು.
ಸುಮಾರು 60 ಕಿ.ಮೀವರೆಗೆ ಬಸ್ ಅನ್ನು ತಾವೇ ಚಾಲನೆ ಮಾಡಿಕೊಂಡು ಬಂದಿದ್ದರು. ಬಳಿಕ ಈ ವಿಡಿಯೋ ಫೇಸ್ಬುಕ್, ವಾಟ್ಸ್ಆ್ಯಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಸಾರಿಗೆ ಇಲಾಖೆಯು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಒಟ್ಟಿನಲ್ಲಿ ರೇಣುಕಾಚಾರ್ಯರಿಗೆ ಇದೊಂದು ಪ್ರಚಾರದ ವಸ್ತುವಾದರೆ, ಈಗ ಡಿಪೋ ಮ್ಯಾನೇಜರ್ಗೆ ಸಂಕಟ ಎದುರಾಗಿರುವುದಂತೂ ಸತ್ಯ.