ದಾವಣಗೆರೆ: ಸಾಮಾಜಿಕ ಮಾಧ್ಯಮಗಳಲ್ಲಿ ಕೊರೊನಾ ಪಾಸಿಟಿವ್ ವ್ಯಕ್ತಿಗೆ ಸಂಬಂಧಪಟ್ಟಂತೆ ಅವರ ಫೋಟೋ ಹರಿದಾಡುತ್ತಿದೆ. ಇದು ಕಾನೂನುಬಾಹಿರವಾಗಿದೆ. ಐಪಿಸಿ ಸೆಕ್ಷನ್ 79 ಹಾಗೂ ರೆಗ್ಯೂಲೇಷನ್ ಆ್ಯಕ್ಟ್ ಪ್ರಕಾರ ವಿಡಿಯೊ, ವೈಯಕ್ತಿಕ ವಿವರಗಳನ್ನು ವಾಟ್ಸ್ ಆ್ಯಪ್ ಹಾಗೂ ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಡುವುದು ಸರಿಯಲ್ಲ. ಇಂತಹವರ ವಿರುದ್ಧ ಸೈಬರ್ ಕ್ರೈಂನಡಿ ಕೇಸು ದಾಖಲಿಸುವ ಮೂಲಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಹೆಸರಿನಲ್ಲಿ ಸುಳ್ಳು ಸಂದೇಶ ಹರಿಬಿಟ್ಟ ಪ್ರಕರಣ ಸಂಬಂಧ ತನಿಖೆ ಮುಂದುವರಿದಿದ್ದು, ಈಗಾಗಲೇ ವ್ಯಾಟ್ಸಪ್ ಗ್ರೂಪ್‌ನ ಅಡ್ಮಿನ್‌ಗಳ ವಿಚಾರಣೆ ನಡೆಸಿದ್ದೇವೆ ಎಂದಿದ್ದಾರೆ.
ಜಿಲ್ಲೆಯ ಕೆಲವೆಡೆ ಹಾಗೂ ಜಗಳೂರು, ಸಂತೆಬೆನ್ನೂರು ಸೇರಿದಂತೆ ಹಳ್ಳಿಗಳಲ್ಲಿ ಸೋಂಕು ಹರಡುವ ದೃಷ್ಟಿಯಿಂದ ರಸ್ತೆ ಬಂದ್ ಮಾಡಲಾಗಿದೆ. ಇದರಿಂದ ಕೆಲ ಸಾರ್ವಜನಿಕರಿಗೆ ತೊಂದರೆ ಉಂಟಾಗಿದ್ದು, ದೂರುಗಳು ಬಂದಿವೆ. ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ನಗರದ ಕೆಲ ರಸ್ತೆಗಳಲ್ಲಿ ಗುಂಪು ಗುಂಪಾಗಿ ಜನ ಇರುವುದು ಕಂಡು ಬಂದಿದೆ. ಇದಕ್ಕಾಗಿ ಡ್ರೋನ್ ಬಳಸಿಕೊಂಡು ಅಂತಹವರ ವಿರುದ್ಧ ನಿಗಾ ವಹಿಸಲಾಗುವುದು ಎಂದರು.
ಫ್ಲ್ಯೂ ಕ್ಲಿನಿಕ್:
ವಿದೇಶದಿಂದ ಬಂದವರು ಹಾಗೂ ಇತರ ಜನಸಾಮಾನ್ಯರಿಗೆ ಕೆಮ್ಮು, ಗಂಟಲು ನೋವು ಹಾಗೂ ಜ್ವರದ ಲಕ್ಷಣ ಕಂಡುಬಂದರೆ ಅಂತವರನ್ನು ಗುರುತಿಸಿ ಐಸೋಲೇಷನ್ ವಾರ್ಡ್‍ಗೆ ಕಳುಹಿಸುವುದು ಈ ಕ್ಲಿನಿಕ್‍ನ ಉದ್ದೇಶವಾಗಿದೆ. ಈ ಕೆಲಸಕ್ಕಾಗಿ ಕ್ಲೆರಿಕಲ್ ಸ್ಟಾಫ್ ಸೇರಿದಂತೆ ಇಬ್ಬರು ವೈದ್ಯಕೀಯೇತರ ಅಟೆಂಡರ್ಗಳನ್ನು ಬಳಸಿಕೊಳ್ಳಲಾಗುವುದು ಎಂದು ಹೇಳಿದರು.