ದಾವಣಗೆರೆ: ಜಿಲ್ಲೆಯನ್ನು ಸಂಪೂರ್ಣ ಲಾಕ್‌ಡೌನ್ ಮಾಡುವ ಪ್ರಸ್ತಾಪ ಇಲ್ಲ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ಹೇಳಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಬೇರೆ ಬೇರೆ ಜಿಲ್ಲೆಗಳ ಕೊರೊನಾ ರೋಗಿಗಳನ್ನು ಇಲ್ಲಿಗೆ ಕರೆ ತರುವುದರಿಂದ ಸಾವಿನ ಸಂಖ್ಯೆ ಹೆಚ್ಚಳವಾಗಿದೆ. ತಾಲೂಕು, ಹಳ್ಳಿಮಟ್ಟದಲ್ಲಿ ಲಾಕ್‌ಡೌನ್ ಮಾಡಿಕೊಳ್ಳಲಿ. ಆದ್ರೆ ಜಿಲ್ಲಾಡಳಿತ ಈ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಜೊತೆ ವಿಡಿಯೋ ಕಾನ್ಫರೆನ್ಸ್ನಲ್ಲಿ ಮಾತನಾಡಲಾಗಿದೆ. ಕೊರೊನಾ ಸೋಂಕಿತರ ಮೂಲ ಪತ್ತೆ ಹಚ್ಚುವ ಕಾರ್ಯಕ್ಕೆ ಸಿದ್ಧತೆ ನಡೆಯುತ್ತಿದೆ. ಜೊತೆಗೆ 225 ಕಂಟೈನ್ಮೆಂಟ್ ಝೋನ್ಗಳಿದ್ದು, ಸರ್ವೇಲೆನ್ಸ್ ನಡೆಯುತ್ತಿದೆ. ಖಾಸಗಿ ಆಸ್ಪತ್ರೆಯಲ್ಲಿ ಶೇ. 50ರಷ್ಟು ಬೆಡ್ ವ್ಯವಸ್ಥೆ ಮಾಡಲಾಗಿದ್ದು, ಎಷ್ಟು ಪಾಸಿಟಿವ್ ಬಂದರೂ ಬೆಡ್ ವ್ಯವಸ್ಥೆಯಲ್ಲಿ ಸಮಸ್ಯೆಯಾಗುವುದಿಲ್ಲ ಎಂದು ಮಾಹಿತಿ ನೀಡಿದರು.