ದಾವಣಗೆರೆ: ಕೊರೊನಾ ಮೊದಲನೇ ಅಲೆ ಸೇರಿದಂತೆ 2ನೇ ಅಲೆ ಇಡೀ ದೇಶವನ್ನೇ ನಲುಗಿಸಿದೆ. ಆದರೆ ಈ ಮಹಾಮರಿಯ ಅಟ್ಟಹಾಸಕ್ಕೆ ದಾವಣಗೆರೆಯ ಈ ಗ್ರಾಮಸ್ಥರು ಕಡಿವಾಣ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ.
ಯಾವ ಅಲೆಯಲ್ಲೂ ಕೂಡ ಕೊರೊನಾ ಈ ಗ್ರಾಮಕ್ಕೆ ಕಾಲಿಡದಂತೆ ಕ್ರಮವಹಿಸಿದ್ದರಿಂದ ಇಡೀ ಜಿಲ್ಲೆಗೆ ಇದೊಂದು ಮಾದರಿ ಗ್ರಾಮವಾಗಿದ್ದು, ಸಾಕಷ್ಟು ಪ್ರಶಂಸೆಗಿಟ್ಟಿಸಿದೆ. ಇಷ್ಟಕ್ಕೂ ಅವರು ತೆಗೆದುಕೊಂಡ ಕ್ರಮಗಳ ಬಗ್ಗೆ ಹೇಳ್ತೀವಿ ಓದಿ..
ಜಿಲ್ಲೆಯ ಕರಿಲಕ್ಕೇನಹಳ್ಳಿ ಗ್ರಾಮಕ್ಕೆ ಕೊರೊನಾ ಕಾಲಿಟ್ಟಿಲ್ಲ. ಮೊದಲ ಹಾಗೂ 2ನೇ ಅಲೆಯಲ್ಲೂ ಕೂಡ ಇದುವರೆಗೆ ಒಂದೇ ಒಂದು ಪ್ರಕರಣ ಗ್ರಾಮದಲ್ಲಿ ದಾಖಲಾಗಿಲ್ಲವಂತೆ. ಕರಿಲಕ್ಕೇನಹಳ್ಳಿಯಲ್ಲಿ 139 ಕುಟುಂಬ ವಾಸವಿದ್ದು, 600ಕ್ಕೂ ಹೆಚ್ಚು ಜನರು ಜೀವಿಸುತ್ತಿದ್ದಾರೆ. ಕಳೆದ ಬಾರಿ ಕೊರೊನಾ ಸೋಂಕು ದೇಶದಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆ, ಈ ಗ್ರಾಮದಲ್ಲಿ ಬೇಲಿ ಹಾಕಿ ಗ್ರಾಮಕ್ಕೆ ಯಾರೂ ಬಾರದಂತೆ ಕಟ್ಟುನಿಟ್ಟಿನ ಸುರಕ್ಷತಾ ಕ್ರಮಗಳನ್ನು ಕಾಪಾಡಿಕೊಂಡಿದ್ದರು.
ಸಾಮಾಜಿಕ ಅಂತರ ಪಾಲನೆಗೆ ಹೆಚ್ಚು ಒತ್ತು:
ಕರಿಲಕ್ಕೇನಹಳ್ಳಿಯಲ್ಲಿ ಕೊರೊನಾ ಗ್ರಾಮಕ್ಕೆ ಬರದಂತೆ ಮುಂಜಾಗ್ರತೆ ವಹಿಸಿದ್ದಾರೆ. ಲಾಕ್ಡೌನ್ ಮುಗಿಯುವವರೆಗೂ ಗ್ರಾಮದ ಪ್ರತಿ ಮನೆಮನೆಗೆ ಹೋಗಿ ಜಾಗೃತಿ ಮೂಡಿಸಿದ್ದು, ಇಡೀ ಗ್ರಾಮದ ಜನರಿಗೆ ಸ್ಯಾನಿಟೈಸರ್, ಮಾಸ್ಕ್ ಬಳಕೆ ಹಾಗೂ ಸಾಮಾಜಿಕ ಅಂತರ ಪಾಲನೆಗೆ ಹೆಚ್ಚು ಮಹತ್ವ ನೀಡಲಾಗಿತ್ತು.
ಜಾಗೃತಿ ಮೂಡಿಸಿದ ಪರಿಣಾಮ ಸೋಂಕು ಮುಕ್ತ:
ಗ್ರಾಮಾಂತರ ಪ್ರದೇಶಗಳಲ್ಲಿ ಸೋಂಕು ಹೆಚ್ಚಾಗುತ್ತಿದ್ದಂತೆ ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರು, ಪಿಡಿಒ, ಯುವಕರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಜಾಗೃತಿ ಮೂಡಿಸುವ ಜೊತೆಗೆ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡರು. ಬೆಂಗಳೂರು ಸೇರಿ ಬೇರೆ ಕಡೆಯಿಂದ ಬಂದವರಿಗೆ ಕ್ವಾರಂಟೈನ್ ಕಡ್ಡಾಯ ಮಾಡಲಾಗಿತ್ತು. ಅನಗತ್ಯವಾಗಿ ಮನೆಯಿಂದ ಯಾರೂ ಹೊರಬಾರದಂತೆ ಮುನ್ನೆಚ್ಚರಿಕೆ ವಹಿಸಲಾಗಿತ್ತು. ಮೈಕ್ ಮೂಲಕ ಪ್ರತಿನಿತ್ಯ ಕೋವಿಡ್ ಬಗ್ಗೆ ಜಾಗೃತಿ ಮೂಡಿಸಿದ ಪರಿಣಾಮ ಸೋಂಕು ಮುಕ್ತ ಗ್ರಾಮವಾಗಿದೆ. ಇದರಲ್ಲಿ ಅಧಿಕಾರಿಗಳ ಹಾಗೂ ಗ್ರಾಮದ ಯುವಕರ ಪರಿಶ್ರಮ ಜಾಸ್ತಿ ಇದೆ ಎನ್ನುತ್ತಾರೆ ಗ್ರಾಮ ಪಂಚಾಯತಿ ಅಧ್ಯಕ್ಷ ಹನುಮಂತಪ್ಪ.
ಜಿಲ್ಲೆಯಲ್ಲೇ ಮಾದರಿ:
ಹೀಗೆ ಅಗತ್ಯ ಮುನ್ನೆಚ್ಚರಿಕಾ ಕ್ರಮವನ್ನು ತೆಗೆದುಕೊಂಡಿದ್ದೇ ಗ್ರಾಮಸ್ಥರಿಗೆ ವರದಾನವಾಯಿತು. ಮಹಾಮಾರಿ ಸೋಂಕಿನಿಂದ ಇಡೀ ಗ್ರಾಮವನ್ನೇ ರಕ್ಷಿಸಿದ್ದರಿಂದ ಈ ಗ್ರಾಮ ಇಡೀ ಜಿಲ್ಲೆಯಲ್ಲೇ ಮಾದರಿಯಾಗಿದೆ.
ಇದನ್ನೂ ಓದಿ: ಕಾಂಗ್ರೆಸ್ ನಾಯಕರು ಐದೂ ಜಾತಿಗೆ ಒಬ್ಬೊಬ್ಬರು ಸಿಎಂ ಎಂದು ತಾವೇ ಘೋಷಿಸಿಕೊಂಡಿದ್ದಾರೆ: ಸಚಿವ ಈಶ್ಚರಪ್ಪ ಕಿಡಿ