ದಾವಣಗೆರೆ: ಭಾನುವಾರ ರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ನವವಿವಾಹಿತ ಸ್ಥಳದಲ್ಲಿಯೇ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲ್ಲೂಕಿನ ಕೋಡದ ಬಳಿ ನಡೆದಿತ್ತು. ಈ ಘಟನೆ ನಡೆದು ನಾಲ್ಕೈದು ದಿನಗಳು ಕಳೆದಿದ್ದು, ಇಂದಿಗೂ ಕೂಡ ಕುಟುಂಬಸ್ಥರು ಕಂಬನಿ ಮಿಡಿಯುತ್ತಿದ್ದಾರೆ.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಜಿಗಳಿ ಗ್ರಾಮದ ಮಠದ ರಾಜಯ್ಯ ಮತ್ತು ಶೋಭಾ ದಂಪತಿ ಪುತ್ರ ಸಂಜಯ್ (28) ಅಪಘಾತದಲ್ಲಿ ಮೃತಪಟ್ಟ ನವವಿವಾಹಿತ ಎಂದು ಗುರುತಿಸಲಾಗಿದೆ. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ಸಂಜಯ್, ಕಳೆದ ತಿಂಗಳು ನವೆಂಬರ್ 28ರಂದು ಬೈಲಹೊಂಗಲದ ಪ್ರೀತಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ವಿವಾಹ ಮಹೋತ್ಸವದಲ್ಲಿ ಇಬ್ಬರು ಗೃಹಸ್ಥಾಶ್ರಮಕ್ಕೆ ಪ್ರವೇಶಿಸಿದ್ದರು. ಆದರೆ, ಮದುವೆಯಾಗಿ ಹದಿನೈದು ದಿನಕ್ಕೆ ಇಬ್ಬರನ್ನು ವಿಧಿ ದೂರ ಮಾಡಿದೆ. ಮೃತ ಸಂಜಯ್ ಪತ್ನಿ ಪ್ರೀತಿ ಕೂಡ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದಾರೆ.
ಹನಿಮೂನ್ಗೆ ತೆರಳಿದಾಗ ದುರಂತ: ಮದುವೆ ನಂತರ ಎಲ್ಲ ಶಾಸ್ತ್ರಗಳನ್ನು ಮುಗಿಸಿಕೊಂಡ ಸಂಜಯ್ ಮತ್ತು ಪ್ರೀತಿ ಶನಿವಾರ (ದಿನಾಂಕ 10) ಬೆಳಗ್ಗೆ ಜಿಗಳಿಯಿಂದ ಬೈಕ್ನಲ್ಲಿ ಹನಿಮೂನ್ಗೆ ತೆರಳಿದ್ದರು. ಸಿಗಂದೂರು ನೋಡಿಕೊಂಡು ಮುರುಡೇಶ್ವರದಲ್ಲಿಯೇ ರಾತ್ರಿ ತಂಗಿದ್ದಾರೆ. ಭಾನುವಾರ (ದಿನಾಂಕ 11) ರ ಬೆಳಗ್ಗೆ ಅಲ್ಲಿಂದ ಶಿರಸಿಗೆ ಬಂದು ಮಾರಿಕಾಂಬಾ ದೇವಿ ದರ್ಶನ ಮಾಡಿಕೊಂಡು ವಾಪಸ್ ಜಿಗಳಿಗೆ ಬರುತ್ತಿರುವಾಗ ಅಪಘಾತ ಸಂಭವಿಸಿದೆ.
ಹಂಸಭಾವಿ ಕೋಡ ನಡುವೆ ರಸ್ತೆ ಬದಿ ನಿಂತಿದ್ದ ಕಬ್ಬಿನ ಟ್ರ್ಯಾಕ್ಟರ್‌ಗೆ ದಂಪತಿ ಪ್ರಯಾಣಿಸುತ್ತಿದ್ದ ಬೈಕ್ ಡಿಕ್ಕಿ ಹೊಡೆದಿದೆ. ಪರಿಣಾಮ ನೆಲಕ್ಕೆ ಬಿದ್ದ ಸಂಜಯ್ ತಲೆಗೆ ತೀವ್ರ ಪೆಟ್ಟಾಗಿದ್ದು, ಎರಡೂ ಕಿವಿಯಲ್ಲಿ ರಕ್ತಸ್ರಾವವಾಗಿದೆ. ಬೈಕ್‌ನ ಹಿ೦ಬದಿಯಲ್ಲಿದ್ದ ಪ್ರೀತಿಗೂ ತೀವ್ರ ತರಹದ ಗಾಯಗಳಾಗಿವೆ. ಸುದ್ದಿ ತಿಳಿದಾಕ್ಷಣ ಹಂಸಭಾವಿ ಪೊಲೀಸರು ಸ್ಥಳಕ್ಕೆ ಆಗಮಿಸಿ, ಸಂಜಯ್ ಮತ್ತು ಪ್ರೀತಿ ಅವರನ್ನು ರಾಣೇಬೆನ್ನೂರು ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ದಾವಣಗೆರೆ ಬಾಪೂಜೆ ಆಸ್ಪತ್ರೆಗೆ ಕರೆ ತರುವಷ್ಟರಲ್ಲಿ ಸ೦ಜಯ್ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ತಳ್ಳುವ ಗಾಡಿಯಲ್ಲಿ ಮಲಗಿಕೊಂಡೆ ಗಂಡನ ಮುಖ ಸವರಿದ ಪತ್ನಿ: ಶವ ಪರೀಕ್ಷೆ ನಂತರ ಸಂಜಯ್ ನೋಡಲು ಪ್ರೀತಿ ಶವಾಗಾರಕ್ಕೆ ಸ್ಟ್ರೆಚರ್ ಮೇಲೆಯೇ ಆಗಮಿಸಿದ್ದರು. ಬಳಿಕ ಪ್ರೀತಿ ತನ್ನ ಗಂಡನ ಮುಖವನ್ನು ಸವರಿ ದುಃಖಿಸಿದ ಆ ಕ್ಷಣ ಎಲ್ಲರ ಮನಕಲಕುವಂತಿತ್ತು. ಆ ಕ್ಷಣವನ್ನು ನೋಡಿದ ಸಂಜಯ್ ತಂದೆ ರಾಜಯ್ಯ, ಚಿಕ್ಕಪ್ಪ ಬಸವರಾಜಯ್ಯ ಮತ್ತು ಪ್ರೀತಿ ಅವರ ತಂದೆ-ತಾಯಿ ಹಾಗೂ ಇಬ್ಬರು ಸಹೋದರರ ಆಕ್ರಂದನ ಮುಗಿಲು ಮುಟ್ಟಿತ್ತು. ಸಂಜಯ್ ಶವವನ್ನು ಜಿಗಳಿಗೆ ತಂದಾಗ ಇಡೀ ಗ್ರಾಮದಲ್ಲಿ ನೀರವ ಮೌನ ಆವರಿಸಿತ್ತು. ಜೋಡಿಯನ್ನು ಬೇರೆ ಮಾಡಿದ ಅ ವಿಧಿ ವಿರುದ್ಧ ಊರಿನ ಜನ ಕಣ್ಣೀರು ಹಾಕಿ ಹಿಡಶಾಪ ಹಾಕಿದರು.
ಬೆಂಗಳೂರಿನಲ್ಲಿ ಹೊಸ ಮನೆ ನೋಡಿದ್ದ ಜೋಡಿ: ಸಂಜಯ್ ಮತ್ತು ಪ್ರೀತಿ ಇಬ್ಬರ ಹೊಸ ಬದುಕಿಗಾಗಿ ಸಂಜಯ್ ಚಿಕ್ಕಪ್ಪ ಬಸವರಾಜಯ್ಯ ಬೆಂಗಳೂರಿನಲ್ಲಿ ಬಾಡಿಗೆ ಮನೆ ಮಾಡಿದ್ದರು. ಸೋಮವಾರ (ದಿನಾಂಕ 12) ದಿಂದ ಈ ದಂಪತಿ ಬೆಂಗಳೂರಿಗೆ ತೆರಳುವ ಕಾರ್ಯಕ್ರಮವನ್ನೂ ನಿಗದಿ ಮಾಡಿಕೊಂಡಿತ್ತು. ಆದರೆ ಅಷ್ಟರಲ್ಲೇ ಈ ದುರಂತ ಸಂಭವಿಸಿದೆ.
ಅಪಘಾತದಲ್ಲಿ ಪ್ರೀತಿಗೆ ಎರಡೂ ಕೈ, ತಲೆಗೆ ಮತ್ತು ಸೊಂಟಕ್ಕೆ ತೀವ್ರ ಪೆಟ್ಟಾಗಿದ್ದು, ಶಸ್ತ್ರ ಚಿಕಿತ್ಸೆ ಮಾಡುವ ಸಾಧ್ಯತೆ ಇದೆ. ಅವರೀಗ ದಾವಣಗೆರೆಯ ಬಾಪೂಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಂಜಯ್ ಮನೆಯಲ್ಲಿ ನೀರವ ಮೌನ ಆವರಿಸಿದೆ.
ಓದಿ: ಅನ್ಯ ಕೋಮಿನ ಹುಡುಗ-ಹುಡುಗಿ ಮಧ್ಯೆ ಲವ್.. ವಿವಾದವೆಬ್ಬಿಸಿದ 18 ವಿದ್ಯಾರ್ಥಿಗಳನ್ನು ಮನೆಗೆ ಕಳಿಸಿದ ಕಾಲೇಜ್