ದಾವಣಗೆರೆ: ನಗರದ ಜಾಲಿನಗರದ 69 ವರ್ಷದ ವೃದ್ಧನಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 2 ಕ್ಕೇರಿದೆ.
ವೃದ್ಧನಿಗೆ ಸೋಂಕು ಇರುವುದು ಖಚಿತವಾಗುತ್ತಿದ್ದಂತೆ ಆತನ ಟ್ರಾವಲ್ ಹಿಸ್ಟರಿಗಾಗಿ ಜಿಲ್ಲಾಡಳಿತ ಶೋಧ ಆರಂಭಿಸಿದೆ. ಈತ ದಾವಣಗೆರೆ ಬಿಟ್ಟು ಬೇರೆಡೆ ಸಂಚರಿಸಿಲ್ಲ. ಜಿಲ್ಲಾಸ್ಪತ್ರೆಯ ಐಸೊಲೇಷನ್ ವಾರ್ಡ್‌ನಲ್ಲಿ ಚಿಕಿತ್ಸೆ ಮುಂದುವರಿದಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ಮಾಹಿತಿ ನೀಡಿದ್ದಾರೆ.
ರೋಗಿಯ ಕುಟುಂಬದ ಒಂದೂವರೆ ವರ್ಷದ ಮಗು ಹಾಗೂ ಮೂರು ವರ್ಷದ ಇನ್ನೊಂದು ಮಗು ಸೇರಿದಂತೆ ಒಂಬತ್ತು ಜನರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಗಂಟಲು ದ್ರವ ಮಾದರಿ ಸಂಗ್ರಹವನ್ನು ಶಿವಮೊಗ್ಗ ಲ್ಯಾಬ್‌ಗೆ ರವಾನೆ ಮಾಡಲಾಗಿದೆ ಎಂದು ಡಿಸಿ ತಿಳಿಸಿದರು.
ನಿನ್ನೆ ದಾವಣಗೆರೆಯಲ್ಲಿ ಸೋಂಕು ಪತ್ತೆಯಾದ ಸ್ಟಾಫ್ ನರ್ಸ್ ಪ್ರಕರಣಕ್ಕೂ ಈಗ ಪತ್ತೆಯಾದ ವೃದ್ಧನ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ವೃದ್ಧನಿಗೆ ಸೋಂಕು ಇರುವುದು ಆತಂಕ ತಂದಿದೆ. ಆದ್ರೆ ಯಾರೂ ಕೂಡಾ ಎದೆಗುಂದುವ ಅವಶ್ಯಕತೆ ಇಲ್ಲ ಎಂದ ಜಿಲ್ಲಾಧಿಕಾರಿ ಜಾಲಿ ನಗರ ಸೀಲ್ ಡೌನ್ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದರು.