ದಾವಣಗೆರೆ: ಇಲ್ಲಿನ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಜನಿಸಿದ ಎರಡು ಗಂಟೆಯಲ್ಲೇ ಗಂಡು ಶಿಶು ನಾಪತ್ತೆಯಾಗಿದೆ. ಕಳೆದ ಕೆಲ ತಿಂಗಳ ಹಿಂದೆ ಇದೇ ಆಸ್ಪತ್ರೆಯಿಂದ ಹೆಣ್ಣು ಮಗು ನಾಪತ್ತೆಯಾದ ವಿಚಾರ ಮಾಸುವ ಮುನ್ನವೇ ಮತ್ತೊಂದು ಪ್ರಕರಣ ನಡೆದಿದ್ದು, ಮಕ್ಕಳ ಮಾರಾಟ ಜಾಲದ ಅನುಮಾನ ವ್ಯಕ್ತವಾಗಿದೆ.
ನಗರದ ಚಾಮರಾಜಪೇಟೆಯಲ್ಲಿರುವ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ವಿಜಯನಗರ ಜಿಲ್ಲೆಯ ಹರಪನಹಳ್ಳಿ ಪಟ್ಟಣದ ನಿವಾಸಿಯಾದ ಉಮೇಸಲ್ಮಾ ಹಾಗೂ ಇಸ್ಮಾಯಿಲ್ ಜಬೀವುಲ್ಲಾ ದಂಪತಿಯ ಮಗು ನಾಪತ್ತೆಯಾಗಿದೆ. ಉಮೇಸಲ್ಮಾ (22) ಬುಧವಾರ ಸಂಜೆ ಗಂಡು ಮಗುವಿಗೆ ಜನ್ಮ ನೀಡಿದ್ದರು.
ಹೆರಿಗೆ ಬಳಿಕ ಸಂಬಂಧಿಕರ ಕೈಗೆ ಮಗು ಕೊಡುವುದಾಗಿ ಆಸ್ಪತ್ರೆ ಸಿಬ್ಬಂದಿ ಹೇಳಿದ್ದರಂತೆ. ಹೆರಿಗೆ ಬಳಿಕ ತಂದೆ ಇಸ್ಮಾಯಿಲ್ ಜಬೀವುಲ್ಲಾನಿಗೆ ಶಿಶುವಿಗಾಗಿ ಬಟ್ಟೆ ತರಲು ಸಿಬ್ಬಂದಿ ಹೇಳಿದ್ದು, ಅವರು ಬಟ್ಟೆ ತರುವಷ್ಟರಲ್ಲಿ ಮಕ್ಕಳ ತೀವ್ರ ನಿಗಾ ಘಟಕದಲ್ಲಿದ್ದ ಶಿಶು ನಾಪತ್ತೆಯಾಗಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಇದೇ ವೇಳೆ ಶಿಶುವನ್ನು ಮಹಿಳೆಯೊಬ್ಬಳು ಎತ್ತಿಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಬಗ್ಗೆ ಪೊಲೀಸ್ ತನಿಖೆಯ ಬಳಿಕವೇ ಘಟನೆಯ ಸತ್ಯಾಸತ್ಯತೆ ತಿಳಿದುಬರಲಿದೆ.
ಈ ಬಗ್ಗೆ ಪೋಷಕರು ಬಸವನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: ಜೇಮ್ಸ್: ಅಪ್ಪು ಬ್ಯಾನರ್ಗೆ ಹಾಲಿನ ಅಭಿಷೇಕ..ಚಿತ್ರ ಮಂದಿರಗಳೆದುರು ಹುಚ್ಚೆದ್ದು ಕುಣಿದ ಅಭಿಮಾನಿಗಳು