ದಾವಣಗೆರೆ: ವೈದ್ಯರ ಬಳಿ ತೆರಳಿದರೂ ಕಾಯಿಲೆ ವಾಸಿಯಾಗಿರಲಿಲ್ಲ. ಆದ್ರೆ ಇವ್ರ ಬಳಿ ಹೋದ್ರೆ ಎಂತಹ ಕಾಯಿಲೆ ಇದ್ರೂ ವಾಸಿಯಾಗುತ್ತಂತೆ. ಎಂಬಿಬಿಎಸ್ ಓದದಿದ್ದರೂ ರೋಗಿಗಳ ಪಾಲಿನ ವೈದ್ಯರು ಇವರಂತೆ. ಈ ರೀತಿ ಖ್ಯಾತಿ ಪಡೆದಿರುವ ಈ ವ್ಯಕ್ತಿ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಬಾಗಳಿ ಗ್ರಾಮದ ನಾಟಿ ವೈದ್ಯ ಹೊಸೂರಪ್ಪ.
ಮೂಳೆ ಮುರಿತದಿಂದ ನೋವನ್ನು ಅನುಭವಿಸುವ ಜನರು ಇವರ ಹತ್ತಿರ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಪದವೀಧರರಾಗಿದ್ದರೂ ಕೂಡ ನೌಕರಿಯ ಜಂಟಾಟಕ್ಕೆ ಹೋಗದೆ ಸಮಾಜಿಕ ಸೇವೆಗಿಳಿದಿದ್ದಾರೆ. ಸಮೀಪದ ಕಾಡಿನಿಂದ ಔಷಧಿ ಗಿಡ ಮೂಲಿಕೆಗನ್ನು ತಂದು ಸ್ವತಃ ಇವರೇ ಔಷಧಿ ತಯಾರಿಸಿ ಚಿಕಿತ್ಸೆ ನೀಡುತ್ತಾರೆ.
ತಂದೆ ಕೆಂಚಪ್ಪನವರ ವೃತ್ತಿಯನ್ನೇ ಮುಂದುವರೆಸಿಕೊಂಡು ಹೋಗುತ್ತಿರುವ ಹೊಸೂರಪ್ಪ, ಇಲ್ಲಿಗೆ ಬರುವ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡುತ್ತಾರೆ. ರೋಗಿಗಳು ಕೊಟ್ಟಷ್ಟು ದುಡ್ಡು ಮಾತ್ರ ತೆಗೆದುಕೊಳ್ಳುತ್ತಾರೆ. ಇನ್ನೊಂದು ವಿಶೇಷ ಅಂದ್ರೆ ಆ ರೀತಿಯಲ್ಲಿ ಪಡೆದ ದುಡ್ಡಿನಿಂದ ಊರಿನವರಿಗೆ ಉಪಯೋಗವಾಗಲಿ ಎಂದು ಸಮುದಾಯ ಭವನ ನಿರ್ಮಿಸಿದ್ದಾರೆ.
ಇಲ್ಲಿಗೆ ಬರುವ ರೋಗಿಗಳು ಬರುವಾಗ ಸ್ವಲ್ಪ ಮೇಕೆ ಹಾಲನ್ನು ತಂದ್ರೆ ಸಾಕು, ಹಾಲಿನ ಜೊತೆ ತಾವು ತಯಾರಿಸಿದ ಔಷಧಿಯನ್ನು ಸೇರಿಸಿ ಚಿಕಿತ್ಸೆ ನೀಡುತ್ತಾರೆ. ಅದ್ರೆ ಇಲ್ಲಿಯವರೆಗೂ ಹೊಸೂರಪ್ಪ ಉಪಯೋಗಿಸುತ್ತಿರುವ ಆ ದಿವ್ಯ ಔಷಧಿ ಯಾವುದೆಂದು ಯಾರಿಗೂ ತಿಳಿದಿಲ್ಲ ಅನ್ನೋದು ಆಶ್ಚರ್ಯ. ಅವರೂ ಕೂಡ ಆ ಗುಟ್ಟನ್ನು ಯಾರಿಗೂ ಬಿಟ್ಟು ಕೊಡುವುದಿಲ್ಲವಂತೆ.
ಹಾಸಿಗೆ ಹಿಡಿದು ಇನ್ಮೇಲೆ ನಡೆದಾಡಲು ಆಗದು ಎಂದುಕೊಂಡ ಎಷ್ಟೋ ಮಂದಿ ಹೊಸೂರಪ್ಪರ ಚಿಕಿತ್ಸೆಯಿಂದ ಗುಣಮುಖರಾಗಿದ್ದಾರೆ. ಕೇವಲ ಬಳ್ಳಾರಿ, ದಾವಣಗೆರೆ ಜಿಲ್ಲೆಯಿಂದ ಮಾತ್ರವಲ್ಲ ಬೇರೆ ಬೇರೆ ಜಿಲ್ಲೆಗಳಿಂದ ಇಲ್ಲಿಗೆ ಜನ ಬರುತ್ತಾರೆ. ರೋಗಿಗಳಿಂದ ಬಂದ ಹಣದಲ್ಲಿ ಆಸ್ತಿಯನ್ನು ಮಾಡಿಲ್ಲ. ಈಗಲೂ ತನ್ನ ತಂದೆ ವಾಸವಿದ್ದ ಹಳೇ ಹಂಚಿನ ಮನೆಯಲ್ಲಿ ವಾಸವಿದ್ದಾರೆ. ಈ ಮೂಲಕ ನಿಸ್ವಾರ್ಥ ಸೇವೆಯಿಂದ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಹೊಸೂರಪ್ಪ ಈ ವಿದ್ಯೆಯನ್ನು ಇದೀಗ ತಮ್ಮ ಮಕ್ಕಳು, ಸಹೋದರರಿಗೆ ಧಾರೆ ಎರೆಯುತ್ತಿದ್ದಾರೆ. ನಾಟಿ ವೈದ್ಯ ವೃತ್ತಿ ಉಳಿಯಬೇಕು ಎನ್ನುವ ದೃಷ್ಟಿಯಿಂದ ಮಕ್ಕಳಿಗೂ ಕೂಡ ಇದನ್ನು ಕಲಿಸುವ ಮೂಲಕ ಹೊಸೂರಪ್ಪ ನಾಟಿ ವೈದ್ಯ ಸಂಸ್ಕೃತಿ ಉಳಿಸುವ ಪ್ರಯತ್ನ ಮಾಡುತ್ತಿದ್ದಾರೆ.