ದಾವಣಗೆರೆ: ತುಂಗಾಭದ್ರಾ ನದಿ ಉಕ್ಕಿ ಹರಿಯುತ್ತಿದ್ದು, ಜಿಲ್ಲೆಯ ಹೊನ್ನಾಳಿ, ಹರಿಹರ ತಾಲೂಕಿನ ನದಿ ಪಾತ್ರದ ಜನರ ಆತಂಕ ಹೆಚ್ಚಾಗಿದೆ.
ತುಂಗಾ ಡ್ಯಾಂನಿಂದ ಹೊರ ಬಿಡಲಾಗುತ್ತಿರುವ ನೀರಿನ ಪ್ರಮಾಣ ಹೆಚ್ಚಾಗುತ್ತಲೆ ಇದೆ. ಇದರಿಂದ 15ಕ್ಕೂ ಹೆಚ್ಚು ನದಿ ಪಾತ್ರದ ಗ್ರಾಮಗಳಲ್ಲಿ ಭಯ ಕಾಡುತ್ತಿದೆ.
ಮಲೆನಾಡು ಭಾಗದಲ್ಲಿ ಸತತವಾಗಿ ಮಳೆ ಸುರಿಯುತ್ತಿದ್ದು, ತುಂಗಭದ್ರಾ ನದಿಯ ನೀರಿನ ಪ್ರಮಾಣ ಏರುತ್ತಿದೆ.
ಇದರಿಂದ ಜಿಲ್ಲೆಯಲ್ಲಿ ಮಳೆ ಇಲ್ಲದಿದ್ದರೂ ಪ್ರವಾಹದ ಭೀತಿ ಜನರನ್ನು ಆವರಿಸಿದೆ. ನ್ಯಾಮತಿ, ನಚೀಲೂರು, ಗೋವಿನಕೋವಿ, ಕುರುವ ಗ್ರಾಮಗಳ ರೈತರು ಮುಂಜಾಗ್ರತಾ ಕ್ರಮವಾಗಿ ಹೊಳೆಗೆ ಅಳವಡಿಸಿರುವ ಪಂಪ್ ಸೆಟ್ಗಳನ್ನು ಸ್ಥಳಾಂತರಿಸುತ್ತಿದ್ದಾರೆ.
ಹರಿಹರ ತಾಲೂಕಿನಲ್ಲಿಯೂ ನೀರಿನ ಹರಿವು ಏರುತ್ತಿದೆ. ಹರಿಹರ ತಾಲೂಕಿನ ಸಾರಥಿ -ಚಿಕ್ಕಬಿದಿರೆ ಸಂಪರ್ಕ ಕಲ್ಪಿಸುವ ಸೇತುವೆ ಸಂಪೂರ್ಣ
ಮುಳುಗಡೆಯಾಗಿದ್ದು, ಶಾಲಾ ಮಕ್ಕಳು ಹಾಗೂ ಗ್ರಾಮಸ್ಥರ ಸಂಚಾರಕ್ಕಾಗಿ ಜಿಲ್ಲಾಡಳಿತವು ತಾತ್ಕಾಲಿಕ ಬೋಟ್ ವ್ಯವಸ್ಥೆ ಮಾಡಿದೆ. ಸಾವಿರಾರು ಎಕರೆ ಹೊಲ, ಗದ್ದೆಗಳು ಜಲಾವೃತಗೊಂಡಿವೆ.
ಲಕ್ಷಾಂತರ ರೂಪಾಯಿ ಮೌಲ್ಯದ ಭತ್ತ ಹಾಗೂ ಮೆಕ್ಕೆಜೋಳ ಹಾನಿಗೀಡಾಗಿದೆ. ತಾಲೂಕಿನ ಉಕ್ಕಡಗಾತ್ರಿಯಲ್ಲಿ ಜಲದಿಗ್ಬಂಧನ ಹಾಗೆಯೇ ಮುಂದುವರಿದಿದೆ. ಫತ್ಯಾಪುರ, ತುಮ್ಮಿನಕಟ್ಟೆ ಮೂಲಕ ಹೋಗುವ ರಸ್ತೆ ಬಂದ್ ಆಗಿದೆ. ಮಳೆ ಕಡಿಮೆಯಾದರೂ ಪ್ರವಾಹದ ಭಯ ಮಾತ್ರ ಹೆಚ್ಚಾಗುತ್ತಲೆ ಇದೆ.