ದಾವಣಗೆರೆ: ಬೆಳಗಾವಿಯ ಪೀರನವಾಡಿಯಲ್ಲಿ ರಾಯಣ್ಣ ಪ್ರತಿಮೆ ನಿರ್ಮಾಣಕ್ಕೆ ಅನುಮತಿ ನೀಡುವಂತೆ ಒತ್ತಾಯಿಸಿ ನಗರದಲ್ಲಿ ಕರ್ನಾಟಕ ನವನಿರ್ಮಾಣ ಸೇನೆ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಬೆಳಗಾವಿ ಜಿಲ್ಲಾಡಳಿತ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು. ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪಿಸಲು ಬೆಳಗಾವಿ ಜಿಲ್ಲಾಡಳಿತ ಅಡ್ಡಿಪಡಿಸುತ್ತಿರುವುದು ಸರಿಯಲ್ಲ. ಕ್ರಾಂತಿ ವೀರ ರಾಯಣ್ಣನ ಜನ್ಮಭೂಮಿ ಬೆಳಗಾವಿ. ಮರಾಠ ಹೋರಾಟಗಾರರ ಪ್ರತಿಮೆ ನಿರ್ಮಾಣ ಮಾಡುವಾಗ ಯಾವುದೇ ನಿಯಮಗಳು ಅಡ್ಡ ಬರಲ್ಲ. ಆದರೆ ಕನ್ನಡ ಸೇನಾನಿಗಳ ಪ್ರತಿಮೆ ವಿಚಾರ ಬಂದಾಗ ನಿಯಮಗಳು ಅಡ್ಡಿ ಬರುತ್ತವೆಯಾ ಎಂದು ಪ್ರಶ್ನಿಸಿದರು.
ಇದು ಕನ್ನಡ ಹೋರಾಟಗಾರನಿಗೆ ಜಿಲ್ಲಾಡಳಿತ ಮಾಡುತ್ತಿರುವ ಅಪಮಾನ. ಈ ಕೂಡಲೇ ಪ್ರತಿಮೆ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.