ದಾವಣಗೆರೆ : ವ್ಯಕ್ತಿಯ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಹುಣಸಘಟ್ಟ ಗ್ರಾಮದಲ್ಲಿ ನಡೆದಿದೆ. ನಜೀರ್ ಉಲ್ಲಾ (46) ಎಂಬುವರು ಕೊಲೆಯಾದ ವ್ಯಕ್ತಿ ಎಂದು ತಿಳಿದು ಬಂದಿದೆ.
ಕಳೆದ ರಾತ್ರಿ ಹುಣಸಘಟ್ಟ ಗ್ರಾಮದ ಟಿಪ್ಪು ಸರ್ಕಲ್ ಬಳಿ ಮಲಗಿದ್ದಾಗ ಈ ಹತ್ಯೆ ಮಾಡಲಾಗಿದೆ ಎನ್ನಲಾಗ್ತಿದೆ. ಹಣಕ್ಕಾಗಿ ಕೊಲೆ ಮಾಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಓದಿ:ಅಪರಿಚಿತ ವ್ಯಕ್ತಿಯ ಶವ ಪತ್ತೆ: ಕೊಲೆ ಮಾಡಿ ಎಸೆದಿರುವ ಶಂಕೆ
ಕೊಲೆಯಾದ ವ್ಯಕ್ತಿಗೆ ತಂದೆ-ತಾಯಿ ಇಲ್ಲ ಮತ್ತು ಮದುವೆಯೂ ಆಗಿಲ್ಲ. ಆತ ಹುಣಸಘಟ್ಟ ಗ್ರಾಮದ ಶಾಲೆ ಮತ್ತು ಖಾಸಗಿ ಕಟ್ಟಡಗಳಲ್ಲಿ ಮಲಗುತ್ತಿದ್ದ. ಈತನ ಬಳಿ ಸಾಕಷ್ಟು ಹಣ ಇತ್ತು ಎಂದು ಸ್ಥಳೀಯರು ಮಾಹಿತಿ ನೀಡಿದ್ದು, ಕೊಲೆ ಮಾಡಿ ದುಡ್ಡು ದೋಚಿರುವ ಶಂಕೆ ವ್ಯಕ್ತವಾಗಿದೆ.
ಘಟನಾ ಸ್ಥಳಕ್ಕೆ ಹೊನ್ನಾಳಿ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸುವ ಮೂಲಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.