ದಾವಣಗೆರೆ: ಪ್ರಿಯಕರನ ಮೇಲೆ ಆತನ ಪ್ರೇಯಸಿಯೇ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಆರೋಪ ಪ್ರಕರಣ ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗ ಸಮೀಪದ ವಡ್ಡಿನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಪರಸಪ್ಪ ಅಲಿಯಾಸ್ ಪರಶುರಾಮ್ ಮೂರು ದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸಿ ಸಾವನ್ನಪ್ಪಿರುವ ಪ್ರೇಮಿ. ಆತನ ಈ ಕೃತ್ಯವೆಸಗಿದ ಆರೋಪಿ ಲಕ್ಷ್ಮೀ ಬಾಯಿಯನ್ನು ಅರಸೀಕೆರೆ ಪೊಲೀಸರು ಬಂಧಿಸಿದ್ದಾರೆ.
ಪರಸಪ್ಪ ಹಾಗೂ ಲಕ್ಷ್ಮೀ ಬೇರೆ ಬೇರೆ ಜಾತಿಯವರಾಗಿದ್ದು, ಕಳೆದ ಐದು ವರ್ಷಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗ್ತಿದೆ. ಆದ್ರೆ ಇತ್ತೀಚೆಗಷ್ಟೆ ಲಕ್ಷ್ಮೀಗೆ ಬೇರೊಬ್ಬ ಯುವಕನ ಜೊತೆ ನಿಶ್ಚಿತಾರ್ಥ ನಡೆದಿತ್ತು. ಇದರಿಂದ ಸಿಟ್ಟಿಗೆದ್ದ ಪರಸಪ್ಪ ಲಕ್ಷ್ಮೀ ಮನೆಗೆ ತೆರಳಿದ್ದನಂತೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು ಎಂದು ಹೇಳಲಾಗ್ತಿದೆ.
ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿದಾಗ ಆಕ್ರೋಶಗೊಂಡ ಲಕ್ಷ್ಮೀಯು ಪರಸಪ್ಪನ ಮೇಲೆ ಸೀಮೆಎಣ್ಣೆ ಎರಚಿ ಬೆಂಕಿ ಹಚ್ಚಿದ್ದಾಳೆ. ಇದರಿಂದ ತಪ್ಪಿಸಿಕೊಳ್ಳಲು ಬಣವೆಗೆ ಮೈ ಉಜ್ಜಿದ್ದ. ಹುಲ್ಲಿನ ಬಣವೆಯೂ ಬೆಂಕಿಗೆ ಆಹುತಿಯಾಗಿದೆ. ಮತ್ತೊಂದೆಡೆ ತೀವ್ರವಾಗಿ ಗಾಯಗೊಂಡಿದ್ದ ಪರಸಪ್ಪ ಚಿಕಿತ್ಸೆ ಫಲಕಾರಿಯಾಗದೇ ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.
ಲಕ್ಷ್ಮೀ ಒಬ್ಬಳೇ ಈ ಕೃತ್ಯ ಎಸಗಿಲ್ಲ. ಆಕೆಯ ಮನೆಯವರು ಹಾಗೂ ಕೆಲವರು ಸೇರಿಕೊಂಡು ಈ ಕೃತ್ಯ ಎಸಗಿದ್ದಾರೆ. ಲಕ್ಷ ಲಕ್ಷ ಹಣ ಪಡೆದು ಲಕ್ಷ್ಮೀ ಮೋಸ ಮಾಡಿದ್ದಾಳೆ. ಪರಸಪ್ಪನನ್ನು ಕೊಂದು ಹಾಕಿರುವ ಆಕೆ ಮತ್ತು ಆಕೆಯ ಕುಟುಂಬದವರಿಗೆ ತಕ್ಕ ಶಿಕ್ಷೆಯಾಗಬೇಕು ಎಂಬುದು ಮೃತನ ಸಂಬಂಧಿಕರ ಆಗ್ರಹವಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಲಕ್ಷ್ಮೀ ಬಾಯಿಯನ್ನು ಬಂಧಿಸಿ ಬಳ್ಳಾರಿ ಜೈಲಿಗೆ ಅಟ್ಟಿದ್ದಾರೆ.