ದಾವಣಗೆರೆ : ಕೊರೊನಾ ಶಂಕಿತರನ್ನ ಕರೆತರಲಾಗುತ್ತಿದೆ ಎಂಬ ವದಂತಿ ಹಬ್ಬಿದ ಕಾರಣ ಹೊನ್ನಾಳಿ ಪಟ್ಟಣದ ತುಂಗಭದ್ರಾ ಬಡಾವಣೆಯ ದೇವರಾಜ್ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದ ಸುತ್ತಮುತ್ತ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಗುಜರಾತ್,ದಾವಣಗೆರೆಯ ಕೊರೊನಾ ಶಂಕಿತರನ್ನ ತುಂಗಭದ್ರಾ ಬಡಾವಣೆಗೆ ಕರೆ ತರುತ್ತಾರೆಂದು ಕೆಲ ಕಿಡಿಗೇಡಿಗಳು ಅಪಪ್ರಚಾರ ಮಾಡಿದ್ದರಿಂದ ಬಡಾವಣೆ ಜನರು ಆತಂಕಗೊಂಡಿದ್ರು. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಹೊನ್ನಾಳಿ ಶಾಸಕ ಎಂ ಪಿ ರೇಣುಕಾಚಾರ್ಯ, ಯಾವುದೇ ಕೊರೊನಾ ಶಂಕಿತರನ್ನ ಇಲ್ಲಿಗೆ ಕರೆ ತರುವುದಿಲ್ಲ. ನೀವು ಆತಂಕಪಡುವ ಅಗತ್ಯವಿಲ್ಲ.
ನನ್ನ ಕುಟುಂಬದವರು ಎಷ್ಟು ಮುಖ್ಯವೋ,ಅದೇ ರೀತಿ ಹೊನ್ನಾಳಿ ಹಾಗೂ ನ್ಯಾಮತಿ ಅವಳಿ ತಾಲೂಕಿನ ಜನರೂ ಕೂಡ ನನಗೆ ಮುಖ್ಯ. ಇಲ್ಲಿಗೆ ಯಾರನ್ನು ಕರೆ ತರುವುದಿಲ್ಲ. ಅವಳಿ ತಾಲೂಕುಗಳಲ್ಲಿ ಯಾವುದೇ ಕೊರೊನಾ ಪಾಸಿಟಿವ್ ಕೇಸ್ ಇಲ್ಲ. ಮುನ್ನೆಚ್ಚರಿಕೆಯಿಂದ ಐದು ಕೊಠಡಿಗಳನ್ನು ಕಾಯ್ದಿರಿಸಲಾಗಿದೆ ಅಷ್ಟೇ.. ಹೊರಗಿನಿಂದ ಯಾರನ್ನೂ ಇಲ್ಲಿಗೆ ಕರೆ ತರುವುದಿಲ್ಲ ಎಂದು ಭರವಸೆ ನೀಡಿದರು.