ದಾವಣಗೆರೆ: ಪಾದರಾಯನಪುರದಲ್ಲಿ ಗಲಾಟೆ ಮಾಡಿದ್ದ ಆರೋಪಿಗಳನ್ನು ರಾಮನಗರ ಜೈಲಿಗೆ ಕಳುಹಿಸಿದ್ದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ವಿರುದ್ಧ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಕಿಡಿಕಾರಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಇಂತಹ ವಿಚಾರದಲ್ಲಿ ರಾಜಕೀಯ ಮಾಡುವುದು ಬೇಡ. ರಾಜ್ಯ ಸರ್ಕಾರಕ್ಕೆ ಎಲ್ಲಾ ಜಿಲ್ಲೆಗಳು ಒಂದೇ. ಸೇಡಿನ ರಾಜಕಾರಣ ಮಾಡಿಲ್ಲ. ಸರ್ಕಾರ ರಾಮನಗರದಲ್ಲಿ ಕೊರೊನಾ ಸೋಂಕು ಹರಡಲಿ ಎಂಬ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಂಡಿಲ್ಲ. ಕುಮಾರಸ್ವಾಮಿ ಪುತ್ರ ನಿಖಿಲ್ ಮದುವೆ ನಡೆದ ಬಗ್ಗೆ ಯಡಿಯೂರಪ್ಪ ಅವರೇ ಶ್ಲಾಘಿಸಿದ್ದಾರೆ. ಹೀಗಿದ್ದಾಗ್ಯೂ ರಾಜಕಾರಣ ಮಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಜಮೀರ್ ಅಹ್ಮದ್ ಕಿಡಿಗೇಡಿ ಶಾಸಕ!
ಶಾಸಕ ಜಮೀರ್ ಅಹ್ಮದ್ ಓರ್ವ ಕಿಡಿಗೇಡಿ ಶಾಸಕ. ಸಾರಾಯಿಪಾಳ್ಯ ಹಾಗೂ ಪಾದರಾಯನಪುರದಲ್ಲಿ ಗಲಾಟೆ ಆಗಲು ಜಮೀರ್ ಕುಮ್ಮಕ್ಕೇ ಕಾರಣ. ಸರ್ಕಾರ ಎಷ್ಟೇ ದೊಡ್ಡವರಾದರೂ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಿದೆ. ಆಶಾ ಕಾರ್ಯಕರ್ತೆಯರು ಸುಡುಬಿಸಿಲಿನಲ್ಲಿ ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಕೊರೊನಾ ಸೋಂಕು ಹರಡುವಿಕೆ ತಡೆಯಲು ಕಷ್ಟಪಟ್ಟು ದುಡಿಯುತ್ತಿದ್ದಾರೆ. ನಿನ್ನನ್ನು ಕೇಳಿ ಬರಲು ಅದೇನೂ ನಿಮ್ಮ ಮಾವನ ಮನೆಯಾ ಎಂದು ಜಮೀರ್ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು.
ಸಣ್ಣಪುಟ್ಟ ವ್ಯತ್ಯಾಸಗಳಾಗಿವೆ, ಮರುಕಳಿಸದಂತೆ ಎಚ್ಚರ ವಹಿಸುತ್ತೇನೆ:
ಪದೇ ಪದೇ ನೀವು ಲಾಕ್ ಡೌನ್ ಉಲ್ಲಂಘನೆ ಮಾಡುತ್ತೀರ ಎಂಬ ಆರೋಪಕ್ಕೆ ಸ್ಪಷ್ಟನೆ ನೀಡಿದ ರೇಣುಕಚಾರ್ಯ, ಆಶಾ ಕಾರ್ಯಕರ್ತೆಯರು ಒಂದೆಡೆ ಸೇರಿದ್ದ ವೇಳೆ ಸಾಮಾಜಿಕ ಅಂತರ ಉಲ್ಲಂಘನೆಯಾಗಿದ್ದನ್ನು ಒಪ್ಪಿಕೊಂಡರು. ಹೊನ್ನಾಳಿ, ನ್ಯಾಮತಿ ತಾಲೂಕಿನ ವಿವಿಧೆಡೆ ಸಂಚಾರ ಮಾಡಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದೇನೆ. ಅದೇ ರೀತಿಯಲ್ಲಿ ಆಶಾ ಕಾರ್ಯಕರ್ತೆಯರಿಗೆ ಆತ್ಮಸ್ಥೈರ್ಯ ತುಂಬಿದ್ದೇನೆ ಎಂದರು.