ದಾವಣಗೆರೆ: ರಾಜ್ಯದಲ್ಲಿ ಮೆಕ್ಕೆಜೋಳ ಬೆಳೆಗಾರರು ಸಂಕಷ್ಟದಲ್ಲಿದ್ದು, ಸಿಎಂ ಕ್ಷೇತ್ರ ಶಿಕಾರಿಪುರದಲ್ಲಿ ಹೆಚ್ಚು ಮೆಕ್ಕೆಜೋಳ ಖರೀದಿಸಲಾಗಿದ್ದು, ಉಳಿದೆಡೆ ಈ ಮಾನದಂಡ ಅನುಸರಿಸಿಲ್ಲ. ಈ ತಾರತಮ್ಯ ಏಕೆ ಎಂದು ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ಬಲ್ಲೂರು ರವಿಕುಮಾರ್ ಪ್ರಶ್ನಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪನವರು ಶಿಕಾರಿಪುರಕ್ಕೆ ಮಾತ್ರ ಮುಖ್ಯಮಂತ್ರಿಯೋ, ರಾಜ್ಯಕ್ಕೋ?. ಅವರ ಕ್ಷೇತ್ರದಲ್ಲಿ ಹೆಚ್ಚು ಹಣ ತಂದು ಅಭಿವೃದ್ದಿ ಮಾಡಲಿ. ಅದಕ್ಕೆ ಅಭ್ಯಂತರವೇನಿಲ್ಲ. ರೈತರ ನಡುವೆಯೆ ತಾರತಮ್ಯ ಮಾಡುವುದು ಸರಿಯೇ?. ಕೆಎಂಎಫ್ ನಿಂದ 2 ಲಕ್ಷ ಟನ್ ಮೆಕ್ಕೆಜೋಳ ಖರೀದಿಸುವುದಾಗಿ ಹೇಳಿತ್ತಾದರೂ ಅದು ಇನ್ನೂ ಆಗಿಲ್ಲ. ಜಿಲ್ಲೆಯಲ್ಲಿ ಒಟ್ಟು 4 ಸಾವಿರ ಹೆಕ್ಟೇರ್ ನಲ್ಲಿ ಮುಂಗಾರು ಮೆಕ್ಕೆಜೋಳ ಬಿತ್ತನೆ ಮಾಡಿದ್ದು, ಎಕರೆಗೆ ಕೇವಲ 20 ರಿಂದ 25 ಚೀಲ ಜೋಳ ಬೆಳೆಯಲಾಗಿದೆ. ಸೂಕ್ತ ವೇಳೆಗೆ ಖರೀದಿ ಕೇಂದ್ರಗಳನ್ನು ಆರಂಭಿಸದಿದ್ದರಿಂದ ಈಗಾಗಲೇ ನಷ್ಟ ಅನುಭವಿಸಿದ್ದಾರೆ. ಆದರೆ, ಸರ್ಕಾರ ಮಾತ್ರ ಇನ್ನೂ ನೆರವಿಗೆ ಬರುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಸುಮಾರು 600 ಹೆಕ್ಟೇರ್ ಪ್ರದೇಶದಲ್ಲಿ ತರಕಾರಿ ಬೆಳೆಯಲಾಗುತ್ತಿದೆ. ಲಾಕ್ ಡೌನ್ ವೇಳೆ ಸೂಕ್ತ ಬೆಲೆ, ಮಾರುಕಟ್ಟೆ ಇಲ್ಲದ ಕಾರಣ ರೈತರು ಕಟಾವು ಮಾಡದೆ ಬೆಳೆದ ಬೆಳೆ ಹೊಲದಲ್ಲಿಯೇ ಬಿಟ್ಟು ಕೊಳೆತು ಹೋಗಿದೆ. ಆದ್ರೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನ್ನದಾತರ ನೆರವಿಗೆ ಬಂದಿಲ್ಲ. ಭತ್ತ, ಅಡಿಕೆ, ಮಾವು, ಎಲೆಬಳ್ಳಿ ಸೇರಿದಂತೆ ಇತರೆ ಬೆಳೆ ಬೆಳೆದವರ ಪಾಡು ಹೇಳತೀರದ್ದಾಗಿದೆ. ಕೂಡಲೇ ರೈತರ ನೆರವಿಗೆ ಸರ್ಕಾರ ಧಾವಿಸಬೇಕು ಎಂದು ಆಗ್ರಹಿಸಿದರು.