ದಾವಣಗೆರೆ : ಪಾಲಿಕೆಯ ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ, ಸಾರ್ವಜನಿಕ ಆರೋಗ್ಯ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ, ನಗರ ಯೋಜನೆ ಮತ್ತು ಸುಧಾರಣೆ ಸ್ಥಾಯಿ ಸಮಿತಿ, ಲೆಕ್ಕಪತ್ರಗಳ ಸ್ಥಾಯಿ ಸಮಿತಿಗಳಿಗೆ ಚುನಾವಣೆ ನಡೆಯಿತು. 28 ಸ್ಥಾನಗಳ ಪೈಕಿ ಕಾಂಗ್ರೆಸ್‌ನಿಂದ 16 ಜನ, ಬಿಜೆಪಿಯಿಂದ 12 ಸದಸ್ಯರು ಆಯ್ಕೆಯಾಗಿದ್ದು ಕಾಂಗ್ರೆಸ್ ಮೇಲುಗೈ ಸಾಧಿಸಿತು.
ನಾಲ್ಕು ಸ್ಥಾಯಿ ಸಮಿತಿಗಳಿಗೆ ನಡೆದ ಚುನಾವಣೆಯಲ್ಲಿ ಒಂದು ಸ್ಥಾಯಿ ಸಮಿತಿಯಲ್ಲಿ ಏಳು ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಒಂದು ಸ್ಥಾಯಿ ಸಮಿತಿಯಲ್ಲಿ ನಾಲ್ಕು ಜನ ಕಾಂಗ್ರೆಸ್ ಸದಸ್ಯರು ಅವಿರೋಧವಾಗಿ ಆಯ್ಕೆಯಾದರೆ, ಬಿಜೆಪಿಯ ಮೂರು ಜನ ಸದಸ್ಯರು ಆಯ್ಕೆಯಾದರು. ಅವಿರೋಧ ಆಯ್ಕೆಯಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪ, ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಪರಿಷತ್ ಸದಸ್ಯ ಜಬ್ಬಾರ್ ಪ್ರಮುಖ ಪಾತ್ರವಹಿಸಿದ್ದರು.
ಶಾಮನೂರು ಶಿವಶಂಕರಪ್ಪ ಪ್ರತಿಕ್ರಿಯೆ : ಎಲ್ಲೆಡೆ ನಿಮ್ಮದೇ ಅಧಿಕಾರ ಎಂಬ ಮಾಧ್ಯಮಗಳ ಪ್ರಶ್ನೆಗೆ ಶಾಮನೂರು ಶಿವಶಂಕರಪ್ಪ ಪ್ರತಿಕ್ರಿಯಿಸಿ, ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಎಂದು ಖಾರವಾಗಿ ನುಡಿದರು. ನೂತನ ಸರ್ಕಾರದ ಸಚಿವರು ಕಮಿಷನ್ ಪಡೆಯುತ್ತಿದ್ದಾರೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿ, ಕಮಿಷನ್ ಪಡೆಯುತ್ತೆದ್ದೇವೆ ಎಂದು ಬಿಜೆಪಿಯವರು ಅಪಪ್ರಚಾರ ಮಾಡ್ತಿದ್ದಾರೆ. ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಗುತ್ತಿಗೆದಾರರು ಆರೋಪ ಮಾಡಲು ಇನ್ನು ಸರ್ಕಾರದಿಂದ ಹಣನೇ ಬಿಡುಗಡೆಯಾಗಿಲ್ಲ. ಕಾಮಾಗಾರಿಗಳೇ ಆರಂಭವಾಗಿಲ್ಲ. ಕಮಿಷನ್ ಎಲ್ಲಿಂದ ಪಡೆಯುವುದು? ಎಂದರು.
ಮುಂಬರುವ ಲೋಕಸಭಾ ಚುನಾವಣೆ ಸಂಸದ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದೇನೆ. ನಾನು ಸ್ಪರ್ಧೆ ಮಾಡಲು ಟಿಕೆಟ್ ಕೇಳಿದ್ದೇನೆ. ಸರ್ಕಾರ ಏನ್ ಮಾಡುತ್ತೋ ನೋಡಬೇಕು. ಯಾರೋ ನಾನು ಅಭ್ಯರ್ಥಿ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ ಎಂದು ಹೇಳಿದರು.
ಎಸ್.ಎಸ್.ಮಲ್ಲಿಕಾರ್ಜುನ್ ಹೇಳಿಕೆ : ಮಂಡ್ಯದಲ್ಲಿ ಪೇಸಿಎಸ್ ವಿಚಾರವಾಗಿ ಪ್ರತಿಕ್ರಿಯಿಸಿ, ಬಿಜೆಪಿಯವರು ಎಲೆಕ್ಷನ್ ಭಯದಿಂದ ಏನಾದರೂ ಮಾಡಬೇಕು ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಮೇಲೆ ಕಮಿಷನ್ ವಿಚಾರವಾಗಿ ಗೂಬೆ ಕೂರಿಸ್ತಿದಾರೆ. ಗುತ್ತಿಗೆದಾರರ ಸಂಘದ ಆರೋಪದಂತೆ ನಮ್ಮ ಕಾಂಗ್ರೆಸ್ ಪಕ್ಷದಲ್ಲಿ ಯಾರೂ ಕಮಿಷನ್ ಪಡೆದಿರುವ ಉದಾಹರಣೆ ಇಲ್ಲ. ನಾವು ಎಲ್ಲರೂ ಪ್ರಾಮಾಣಿಕವಾಗಿ ರಾಜ್ಯದಲ್ಲಿ ಉತ್ತಮವಾದ ಸೇವೆ ಮಾಡಲು ಬಂದಿದ್ದೇವೆ. ಎಲ್ಲರೂ ಸೇರಿ ಪ್ರಾಮಾಣಿಕ ಕೆಲಸ ಮಾಡುತ್ತಾರೆ.
ಮೂರೇ ತಿಂಗಳಲ್ಲಿ ಒಳ್ಳೆ ಹೆಸರು ತೆಗೆದುಕೊಂಡರೆಂದು ಬಿಜೆಪಿ ಅಸೂಯೆ ಪಡುತ್ತಿದೆ. ಐದು ಗ್ಯಾರಂಟಿಗಳ ಜಾರಿಯಿಂದ ತಡೆದುಕೊಳ್ಳಲಾಗುತ್ತಿಲ್ಲ. ಅಧಿಕಾರ ಇಲ್ಲದೇ ಅವರು ಹತಾಶರಾಗಿದ್ದಾರೆ. ಅದೇ ಕಾರಣಕ್ಕೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ದಾವಣಗೆರೆ ಉಸ್ತುವಾರಿ ಸಚಿವ ಎಸ್ಎಸ್ ಮಲ್ಲಿಕಾರ್ಜುನ್ ವಾಗ್ದಾಳಿ ನಡೆಸಿದರು.
ಎಸ್ಪಿ ವರ್ಗಾವಣೆಯಲ್ಲಿ ಸರ್ಕಾರದ ಕೈವಾಡ ಇಲ್ಲ : ಎಸ್ಪಿ ಡಾ.ಅರುಣ್ ಕೆ. ಅವರನ್ನು ವರ್ಗಾವಣೆ ಮಾಡಿರುವುದರಲ್ಲಿ ಸರ್ಕಾರದ ಕೈವಾಡ ಇಲ್ಲ. ಅವರು ಚುನಾವಣೆ ಸಂದರ್ಭದಲ್ಲಿ ಬಂದಿದ್ದರು. ಅದರಂತೆ ವಾಪಸ್ ತೆರಳಿದ್ದಾರೆ ಎಂದು ಸಚಿವರು ತಿಳಿಸಿದರು.
ಇದನ್ನೂ ಓದಿ : Basavaraja Bommai: 'ವಿಷಯಾಂತರ ಬಿಟ್ಟು ಗುತ್ತಿಗೆದಾರರ ಸಂಶಯ ನಿವಾರಿಸಿ'- ಡಿಕೆಶಿಗೆ ಬೊಮ್ಮಾಯಿ ತಿರುಗೇಟು