ಹರಿಹರ: ಗುತ್ತೂರು ಬಳಿ ಇರುವ ಕೋವಿಡ್-19 ಕೇಂದ್ರಕ್ಕೆ ಶಾಸಕ ಎಸ್. ರಾಮಪ್ಪ ಭೇಟಿ ನೀಡಿ ಕೊರೊನಾ ಸೋಂಕಿತರ ಯೋಗಕ್ಷೇಮ ವಿಚಾರಿಸಿದರು.
ನಂತರ ಮಾತನಾಡಿದ ಅವರು, ದಿನದಿಂದ ದಿನಕ್ಕೆ ತಾಲೂಕಿನಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಈ ಹಿನ್ನೆಲೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯನ್ನು ಕರೆದು ಕೊರೊನಾ ನಿಯಂತ್ರಣಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಗಮನ ವಹಿಸಬೇಕು ಎಂದರು.
ಸಾರ್ವಜನಿಕರಲ್ಲಿರುವ ಭಯ ಭೀತಿಯನ್ನು ಹೋಗಲಾಡಿಸುವುದಕ್ಕೆ ಜಾಗೃತಿ ಮೂಡಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು. ಇನ್ನೂ ಸೋಂಕು ದೃಢಪಟ್ಟವರಿಗೆ ಪೌಷ್ಟಿಕ ಆಹಾರ, ಬಿಸಿ ನೀರು, ಕಷಾಯ, ಔಷಧಿಗಳನ್ನು ನೀಡಿ ಬೇಗ ಗುಣಮುಖರಾಗುವಂತೆ ಕಾಳಜಿ ವಹಿಸಬೇಕೆಂದು ತಹಶೀಲ್ದಾರ್ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಗೆ ಸ್ಥಳದಲ್ಲೇ ಸೂಚನೆ ನೀಡಿದರು.
ಕೋವಿಡ್ ಸೆಂಟರ್‌ನಲ್ಲಿ ಇರುವಂತಹ ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ. ಆತ್ಮಸ್ಥೈರ್ಯ ಹೆಚ್ಚಿಸಿಕೊಂಡು ಕೊರೊನಾವನ್ನು ಮುಕ್ತ ಮಾಡುವುದಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸೋಣ. ರೋಗದ ವಿರುದ್ಧ ಹೋರಾಡೋಣ, ರೋಗಿಯ ವಿರುದ್ಧ ಅಲ್ಲ ಎಂಬುದನ್ನರಿತು ಜಾಗೃತರಾಗೋಣ ಎಂದು ಹೇಳಿದರು.
ನಂತರ ತಪೋವನ ಆಸ್ಪತ್ರೆಯ ವ್ಯವಸ್ಥಾಪಕ ಡಾ. ಶಶಿಕುಮಾರ್ ಅವರು ಆಯುಷ್ ಕಿಟ್ ಅನ್ನು ಶಾಸಕರ ಸಮ್ಮುಖದಲ್ಲಿ ಕೋವಿಡ್ ಸೆಂಟರ್‌ನಲ್ಲಿರುವ ಸಾರ್ವಜನಿಕರಿಗೆ, ಕೊರೊನಾ ವಾರಿರ್ಯಸ್ ಗೆ ವಿತರಿಸಿದರು.