ಹರಿಹರ (ದಾವಣಗೆರೆ): ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಕೋವಿಡ್ ಕೇಂದ್ರಗಳಲ್ಲಿ ಕಷಾಯ ಮತ್ತು ಬಿಸಿ ನೀರಿನ ಸೌಲಭ್ಯ ಒದಗಿಸುವಂತೆ ಅಧಿಕಾರಿಗಳಿಗೆ ಶಾಸಕ ಎಸ್. ರಾಮಪ್ಪ ಸೂಚಿಸಿದ್ದಾರೆ.
ನಗರದ ಮಿನಿ ವಿಧಾನಸೌಧದ ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಕೋವಿಡ್ ರಕ್ಷಣಾ ಕೇಂದ್ರಗಳಲ್ಲಿ ಸೋಂಕಿತರಿಗೆ ಬಿಸಿ ನೀರಿನ ವ್ಯವಸ್ಥೆ ಹಾಗೂ ಉತ್ತಮ ಆಹಾರ ಕೊಡುತ್ತಿಲ್ಲವೆಂಬ ಬಗ್ಗೆ ನನಗೆ ದೂರುಗಳು ಬಂದಿವೆ. ಅಧಿಕಾರಿಗಳು ಸರ್ಕಾರದ ನಿಯಮಾವಳಿಗಳಂತೆ ಸೋಂಕಿತರಿಗೆ ಕೋವಿಡ್ ಕೇಂದ್ರದಲ್ಲಿ ಕಷಾಯ, ಹಾಲು ಹಾಗೂ ಬಿಸಿನೀರಿನ ವ್ಯವಸ್ಥೆ ಮಾಡಬೇಕೆಂದು ಸೂಚಿಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಅನ್ಲಾಕ್ ಘೋಷಣೆ ಮಾಡಿದ್ದು, ಇನ್ಮುಂದೆ ನಗರದಲ್ಲಿ ವ್ಯಾಪಾರ ವಹಿವಾಟುಗಳು ಈ ಹಿಂದೆ ಇದ್ದ ರೀತಿಯಲ್ಲಿ ನಡೆಯಲಿವೆ. ಆದರೆ, ಸಾರ್ವಜನಿಕರು ಮಾಸ್ಕ್, ಸ್ಯಾನಿಟೈಸರ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಂಡು ತಮ್ಮ ವ್ಯಾಪಾರ-ವಹಿವಾಟುಗಳಲ್ಲಿ ತೊಡಗಬೇಕು ಎಂದರು.
ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ಮಾತನಾಡಿ, ಕೊರೊನಾ ಪಾಸಿಟಿವ್ ಬಂದ ಸೋಂಕಿತರನ್ನು ಮನೆಯಿಂದ ಕೋವಿಡ್ ಕೇಂದ್ರಗಳಿಗೆ ಕರೆತರುವ ಸಲುವಾಗಿ ತಾಲೂಕಿನಾದ್ಯಂತ ಮೂರು ವಾಹನಗಳನ್ನು ಬಾಡಿಗೆ ಪಡೆಯಲಾಗಿದ್ದು, ಅವುಗಳ ಬಾಡಿಗೆಗಾಗಿ ಸುಮಾರು 1.87 ಲಕ್ಷ ರೂ. ಖರ್ಚಾಗಿರುವುದಾಗಿ ತಿಳಿಸಿದರು.
ಪೌರಾಯುಕ್ತೆ ಎಸ್. ಲಕ್ಷ್ಮಿ ಮಾತನಾಡಿ, ಜಿಲ್ಲಾಧಿಕಾರಿಗಳ ಮೂಲಕ ಕೋವಿಡ್-19ರ ಸಂಬಂಧ ಹೆಚ್ಚಿನ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದ್ದು, ಈಗಾಗಲೇ ಪ್ರಸ್ತಾವನೆಯನ್ನೂ ಕಳುಹಿಸಲಾಗಿದೆ. ಆದರೆ, ಇಲ್ಲಿಯತನಕ ಯಾವುದೇ ಹಣ ಮಂಜೂರಾಗಿ ಬಂದಿರುವುದಿಲ್ಲ ಎಂದು ಸ್ಪಷ್ಟಪಡಿಸಿದರು.