ದಾವಣಗೆರೆ : ನಾವೆಲ್ಲ ಕಮಲದ ಚಿಹ್ನೆಯಡಿ ಗೆದ್ದವರು. ಒಟ್ಟಾಗಿ ಕೆಲಸ ಮಾಡಬೇಕಿದೆ. ಅದನ್ನು ಬಿಟ್ಟು ನಾವು ಮಾತನಾಡುವಾಗ ನಾಲಿಗೆ ಮೇಲೆ ಹಿಡಿತವಿರಬೇಕು, ಮಾನಸಿಕ ಸ್ಥಿಮಿತತೆ ಕಡಿಮೆಯಾದ ಹಿನ್ನೆಲೆ ಈ ರೀತಿಯಾಗಿ ಮಾತನಾಡುತ್ತಾರೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಅವರು ಶಾಸಕ ಯತ್ನಾಳ್ ಅವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ, ಸಿಎಂ ಒಳ್ಳೆ ಕೆಲಸ ಮಾಡುತ್ತಿದ್ದಾರೆ. ವಿರೋಧ ಪಕ್ಷ ನಮ್ಮ ಮೇಲೆ ಸಮರ ಸಾರುತ್ತಿವೆ. ಸಿದ್ದರಾಮಯ್ಯ ದನ ತಿನ್ನುತ್ತೇವೆ ಎಂದು ಹುಚ್ಚುಚ್ಚು ಹೇಳಿಕೆ ನೀಡುತ್ತಿದ್ದಾರೆ. ಆಗ ನಾವು ಅವರ ವಿರುದ್ಧ ಒಟ್ಟಾಗಿರಬೇಕು ಎಂದರು.
ಸಿಎಂಗೆ ಯತ್ನಾಳ್ ಗಡುವು ಕೊಡುತ್ತಾ ಹೋಗುತ್ತಿದ್ದು, ಗಡುವು ಕೊಡಲು ನೀವೇನು ರಾಷ್ಟ್ರೀಯ ನಾಯಕರಾ, ರಾಜ್ಯಾಧ್ಯಕ್ಷರಾ ಎಂದು ಪ್ರಶ್ನಿಸಿದರು. ಏನಾದ್ರು ಇದ್ದರೆ ಹಾದೀಲಿ ಬೀದಿಲಿ ಮಾತನಾಡುವುದಲ್ಲ, ನಾಲ್ಕು ಗೋಡೆಯ ಮಧ್ಯ ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು, ವಿನಾಃ ಕಾರಣ ಗೊಂದಲ ಸೃಷ್ಠಿಸುವುದು ಸರಿಯಲ್ಲ ಎಂದರು.
ಹಾದೀಲಿ ಬೀದಿಯಲ್ಲಿ ಮಾತನಾಡಿದ್ರೆ ಪಕ್ಷಕ್ಕೆ ಹಾಗೂ ಸರ್ಕಾರಕ್ಕೆ ಧಕ್ಕೆಯಾಗಲಿದೆ. ಈ ರೀತಿ ಮಾತನಾಡಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕು. ಸಿಎಂ ಕುರ್ಚಿ ಖಾಲಿ ಇಲ್ಲ, ಅದಕ್ಕೆ ಟವಲ್ ಹಾಕಲು ಬರಲ್ಲ, ಅನಾರೋಗ್ಯದಿಂದ ಸಿಎಂ ಕಚೇರಿಗೆ ಬರೋದಿಲ್ಲ ಎಂದು ಯತ್ನಾಳ್ ಹೇಳಿಕೆ ನೀಡುತ್ತಿದ್ದಾರೆ. ಮಾನಸಿಕ ಸ್ಥಿಮಿತತೆ ಕಡಿಮೆಯಾದ ಹಿನ್ನೆಲೆ ಈ ರೀತಿ ಮಾತನಾಡುತ್ತಾರೆ ಎಂದು ಯತ್ನಾಳ್ ವಿರುದ್ಧದ ಎಂ ಪಿ ರೇಣುಕಾಚಾರ್ಯ ಕೆಂಡಾಮಂಡಲವಾಗಿದ್ದಾರೆ.
ಇದನ್ನೂ ಓದಿ: ಮತ್ತೆ ಸಿಎಂ ವಿರುದ್ಧ ಅಸಮಾಧಾನ ಹೊರ ಹಾಕಿದ ಬಸನಗೌಡ ಪಾಟೀಲ್ ಯತ್ನಾಳ್