ದಾವಣಗೆರೆ: "ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒಬ್ಬ ಕೊತ್ವಾಲ್ ಶಿಷ್ಯ, ಜೈಲಿಗೆ ಹೋಗಿ ಬಂದವರು. ಡಿಕೆಶಿ ಬ್ಲೂ ಫಿಲ್ಮಂ ತೋರಿಸುತ್ತಿದ್ದರು ಎಂಬ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಆರೋಪಕ್ಕೆ ನನ್ನ ಸಹಮತವಿದೆ" ಎಂದು ಶಾಸಕ ಎಂಪಿ ರೇಣುಕಾಚಾರ್ಯ ಹೇಳಿದ್ದಾರೆ.
ಹೊನ್ನಾಳಿಯ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, "40% ಕಮಿಷನ್ ಸರ್ಕಾರ ಎಂದು ಕಾಂಗ್ರೆಸ್ ನಾಯಕರು ಆರೋಪ ಮಾಡುತ್ತಿದ್ದಾರೆ. ರಾಜ್ಯದಲ್ಲಿ ನಿಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಹಾಸಿಗೆ, ದಿಂಬು, ಚಂಬು, ಗಂಗಳಾದಲ್ಲೂ ನೀವು ಭ್ರಷ್ಟಾಚಾರ ಮಾಡಿದ್ದೀರಿ. ವಿಜಯಬ್ಯಾಂಕ್‌ನವರಿಗೆ ಡಿಪಾಸಿಟ್ ಮಾಡಿದರೆ ಮಾತ್ರ ಕೆಲಸ ಆಗುತ್ತವೆ ಎಂದು ಅಂದು ಕಾಂಗ್ರೆಸ್ ಮುಖಂಡರು ಹೇಳಿರುವುದು ಸುಳ್ಳೇ ಎಂದು ನಾನು ಡಿಕೆಶಿ, ಸಿದ್ದರಾಮಯ್ಯ ಹಾಗು ಸುರ್ಜೆವಾಲರಿಗೆ ಕೇಳ್ತೀನಿ" ಎಂದರು.
"ಕಾಂಗ್ರೆಸ್ ನಾಯಕರು ಉಚಿತ ವಿದ್ಯುತ್, ಗೃಹಿಣಿಯರಿಗೆ 2000 ರೂ ನೀಡುತ್ತೇವೆ ಎಂದು ಹೇಳಿದ್ದಾರೆ. ಸಿದ್ದರಾಮಯ್ಯನವರೇ ನೀವು ಅಧಿಕಾರದಲ್ಲಿದ್ದಾಗ ಜಾತಿ ಜಾತಿಯ ನಡುವೆ ವಿಷ ಬೀಜ ಬಿತ್ತಿದ್ರಿ, ಧರ್ಮಗಳ ಮಧ್ಯೆ ಸಂಘರ್ಷ ಮಾಡಿಸಿದ್ರಿ, ಟಿಪ್ಪು ಜಯಂತಿ ಮಾಡಿ ಬೆಂಕಿ ಹೆಚ್ಚಿದ್ದು ನೀವು, ಹಿಂದೂ ಯುವಕ ಹತ್ಯೆಯಾಗಿದ್ದು ನಿಮ್ಮ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ. ಯಡಿಯೂರಪ್ಪ ಹಾಗು ಬೊಮ್ಮಾಯಿಯವರ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುವ ನೈತಿಕ ಹಕ್ಕು ನಿಮಗಿಲ್ಲ" ಎಂದು ವಾಗ್ದಾಳಿ ನಡೆಸಿದರು.
"ಕುರ್ಚಿಗೋಸ್ಕರ ಈ ರೀತಿಯ ಆಶ್ವಾಸನೆಗಳನ್ನು ನೀಡುತ್ತಿದ್ದೀರಿ. ರಾಜ್ಯದಲ್ಲಿ ಹಸಿ ಸುಳ್ಳು ಹೇಳಿ ಅಧಿಕಾರಕ್ಕೆ ಬರುವ ಭ್ರಮಾಲೋಕದಲ್ಲಿದ್ದೀರಿ. ಕಾಂಗ್ರೆಸ್ ಅಲ್ಪಸಂಖ್ಯಾತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದೆ. ಈಗ ಅವರು ಕೂಡ ನಮ್ಮ ಪರ ಇದ್ದಾರೆ. ನಾವು 150 ಸ್ಥಾನ ಗೆಲ್ಲುತ್ತೇವೆ" ಎಂದು ಭರವಸೆ ವ್ಯಕ್ತಪಡಿಸಿದರು.
"ಡಿಕೆಶಿಯವರು ಸಿಎಂ ಅಭ್ಯರ್ಥಿ ಯಾರು ಎಂದು ಘೋಷಣೆ ಮಾಡಲಿ. ಆಗ ನಿಮ್ಮನ್ನು ನಿಮ್ಮ ಕಾಂಗ್ರೆಸ್ ನಾಯಕರೇ ಮುಗಿಸುತ್ತಾರೆ. ರಮೇಶ್ ಜಾರಕಿಹೊಳಿಯವರನ್ನು ಷಡ್ಯಂತ್ರದಿಂದ ಮುಗಿಸಲು ಬಲಿಪಶು ಮಾಡಿದ್ದೀರಾ. ರಮೇಶ್ ಅವರ ಜೊತೆ ಕ್ಷೇತ್ರದ ಜನ ಇದ್ದಾರೆ. ಮತ್ತೊಮ್ಮೆ ಗೆದ್ದು ಬಂದು ರಾಜಕೀಯವಾಗಿ ಡಿಕೆಶಿಯವರನ್ನು ಮುಗಿಸುತ್ತಾರೆ" ಎಂದರು.
"ಡಿಕೆಶಿ ಬ್ಲೂ ಫಿಲ್ಮ್ ತೋರಿಸುತ್ತಿದ್ದರು, ವಿಷಕನ್ಯೆಯನ್ನು ಮುಂದಿಟ್ಟು ಬಲಿಪಶು ಮಾಡುತ್ತಾರೆ ಎಂದು ರಮೇಶ್ ಜಾರಕಿಹೊಳಿ ಹೇಳಿರುವುದೆಲ್ಲ ಸರಿ ಇದೆ. ಇದಲ್ಲದೆ ಕೆ.ಎಸ್.ಈಶ್ವರಪ್ಪನವರನ್ನು ಕೂಡ ಅವರೇ ಬಲಿಪಶು ಮಾಡಿದ್ದಾರೆ. ಆದರೆ ಯಾರೂ ಕೂಡ ಬಲಿ ಪಶು ಆಗದೆ ರಾಜಕಾರಣದಲ್ಲಿ ಸದೃಢರಾಗಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಸಿದ್ದರಾಮಯ್ಯನವರು ಒಬ್ಬ ಬಫೂನ್ ಎಂದು ಹೇಳಿದ್ದು ಸರಿಯಲ್ಲ. ಸಿದ್ದರಾಮಯ್ಯನವರು ಡಿಸಿಎಂ ಆಗಿ, ಸಿಎಂ ಆಗಿದ್ದವರು ಅಂತವರು ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರ ಬಗ್ಗೆ ಏಕವಚನದಲ್ಲಿ ಮಾತನಾಡಬಾರದು. ಅವಮಾನ ಮಾಡಿದರೆ ನಿಮ್ಮ ಮೇಲೆ ಜನರ ಗೌರವ ಕಡಿಮೆಯಾಗಲಿದೆ" ಎಂದು ಹೇಳಿದರು.
ಡಿಕೆಶಿ ಕೊತ್ವಾಲ್ ಶಿಷ್ಯ: "ರಾಜಕಾರಣಕ್ಕೆ ಬರುವ ಮುನ್ನ ಡಿಕೆಶಿ ಕೊತ್ವಾಲ್ ಶಿಷ್ಯ ಆಗಿದ್ದರು. ಅವರ ಹಿನ್ನೆಲೆ ನೋಡಿಕೊಳ್ಳಲಿ. ಅವರ ವೈಯಕ್ತಿಕ ನಿಂದನೆ ಮಾಡುವುದಿಲ್ಲ. ಜೈಲಿಗೆ ಹೋಗಿ ಬಂದಿದ್ದು, ಸಾಕಷ್ಟು ಭ್ರಷ್ಟಾಚಾರ ಮಾಡಿದ್ದಾರೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆಗೆ ಸಂಪೂರ್ಣ ಸಹಮತ ಇದೆ" ಎಂದರು.
ಮುಂದಿನ ಚುನಾವಣೆಯಲ್ಲಿ ನನಗೆ ಟಿಕೆಟ್ ಬೇಡ ಬೇರೆಯವರಿಗೆ ಕೊಟ್ರೂ ಅವರನ್ನು ಗೆಲ್ಲಿಸುತ್ತೇನೆ ಎಂದು ರೇಣುಕಾಚಾರ್ಯ ಹೇಳಿದರು. "ನನಗೆ ಟಿಕೆಟ್ ಬೇಡ. ಐದು ವರ್ಷದಿಂದ ಕ್ಷೇತ್ರದಲ್ಲಿದ್ದೇನೆ. ನನಗೆ ಸೋಲಿನ ಭೀತಿ ಇಲ್ಲ, 30 ಸಾವಿರ ಮತಗಳಿಂದ ಗೆಲ್ಲುತ್ತೇನೆ. 2013ರಲ್ಲಿ ನಮ್ಮ ಪಕ್ಷ ಮೂರು ಭಾಗ ಆಗಿದ್ದರಿಂದ ಸೋಲಾಯಿತು. ನಾಲ್ಕನೇ ಬಾರಿ ನನ್ನ ಆಯ್ಕೆ ಮಾಡುತ್ತಾರೆ ಎಂಬ ವಿಶ್ವಾಸ ಇದೆ. ನನ್ನನ್ನು ಕ್ಷೇತ್ರದ ಜನ ಗೆಲ್ಲಿಸುತ್ತಾರೆ. ಮಾಜಿ ಶಾಸಕ ಡಿಜಿ ಶಾಂತನಗೌಡ ಅವರು ಡ್ರಾಮಾ ಮಾಡುತ್ತಿದ್ದಾರೆ. ಅವರಿಗೆ ಸೋಲಿನ ಭೀತಿ ಇದೆ" ಎಂದರು.
ಇದನ್ನೂ ಓದಿ: ರಾಜಕಾರಣ ಹೊಲಸಾಗಿದೆ.. ಮೌಲ್ಯಗಳನ್ನು ಕಳೆದುಕೊಂಡಿದೆ: ಹೆಚ್.ವಿಶ್ವನಾಥ್ ಅಸಮಾಧಾನ