ದಾವಣಗೆರೆ: ನಾನು ಇಷ್ಟು ವರ್ಷದ ರಾಜಕೀಯ ಜೀವನದಲ್ಲಿ ಒಂದು ಕಪ್ಪು ಚುಕ್ಕೆ ಹೊಂದಿರಲಿಲ್ಲ. ಇದೀಗ ಕಾಣದ ಕೈಗಳ ಷಡ್ಯಂತ್ರದಿಂದ ಒಂದು ಕಪ್ಪು ಚುಕ್ಕೆ ಬಂದಿದೆ. ಅದರಿಂದ ನಾನು ಗೆದ್ದು ಬರ್ತೀನಿ ಎಂದು ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಭಾವುಕರಾದ್ರು. ಜಿಲ್ಲೆಯ ಚನ್ನಗಿರಿಯಲ್ಲಿ ಹಮ್ಮಿಕೊಂಡಿದ್ದ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಅವರು ಭಾವುಕರಾಗಿ ಭಾಷಣ ಮಾಡಿದರು.
ಇಷ್ಟು ವರ್ಷದ ರಾಜಕೀಯ ಜೀವನ ಬಿಳಿ ಹಾಳೆಯಂತಿತ್ತು: ಅಧಿಕಾರ ಇರಲಿ, ಬಿಡಲಿ ಜನರ ಮಧ್ಯೆ ಇರುತ್ತೇನೆ. ಜೀವನದಲ್ಲಿ ಉಸಿರು ಇರುವವರೆಗೂ ಚನ್ನಗಿರಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ, ನೀವು ನನ್ನ ಜೊತೆಗಿರಬೇಕು, ಚನ್ನಗಿರಿ ಕ್ಷೇತ್ರದ ಅಭಿವೃದ್ಧಿಯೇ ನನ್ನ ಮೂಲ ಗುರಿ. ಇಷ್ಟು ವರ್ಷದ ರಾಜಕೀಯ ಜೀವನ ಬಿಳಿ ಹಾಳೆ ರೀತಿಯಲ್ಲಿತ್ತು, ಇದೀಗ ಬಂದಿರುವ ಕಳಂಕ ತೊಳೆದು ಹೊರ ಬರುತ್ತೇನೆ. ನೀವು ನನ್ನ ಜೊತೆ ಇರಿ ನಾನು ನಿಮ್ಮ ಜೊತೆ ಇರುತ್ತೇನೆ ಎಂದು ಭಾವುಕ ಮಾತುಗಳನ್ನು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಆಡಿದರು.
ಇನ್ನು ಚನ್ನಗಿರಿ ಕ್ಷೇತ್ರದಲ್ಲಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪನವರು 351 ಕೋಟಿ ರೂಗಳ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದರು. ಚನ್ನಗಿರಿ ಸಾರ್ವಜನಿಕ ಸಭೆಯಲ್ಲಿ ವಿದಾಯದ ಭಾಷಣ ಮಾಡಿದ ಅವರು, 221 ಕೋಟಿ ರೂಪಾಯಿಗಳ ಕಾಮಗಾರಿ ಉದ್ಘಾಟನೆ ಮಾಡಿದರು. ಜೊತೆಗೆ ಇದಲ್ಲದೆ 153 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡಿ, ತಮ್ಮ ಕ್ಷೇತ್ರದ ಜನರೆದುರು ವಿದಾಯದ ಭಾಷಣ ಮಾಡಿದರು.
ಇದನ್ನೂ ಓದಿ: ಶಾಸಕ ಮಾಡಾಳ್ ವಿರೂಪಾಕ್ಷಪ್ಪ ನಿವಾಸದಲ್ಲಿ ಲೋಕಾಯುಕ್ತರಿಂದ ಲಕ್ಷಾಂತರ ನಗದು, ಚಿನ್ನಾಭರಣ ಜಪ್ತಿ
ರೆಡ್ ಹ್ಯಾಂಡಾಗಿ ಸಿಕ್ಕ ಪ್ರಶಾಂತ್ ಮಾಡಾಳ್: ಶಾಸಕ ಮಾಡಾಳ್ ಪುತ್ರ ಪ್ರಶಾಂತ್ ಮಾಡಾಳ್ ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆಗೆ (ಕೆಎಸ್ ಡಿಎಲ್) ರಾಸಾಯನಿಕ ವಸ್ತು ಖರೀದಿಗಾಗಿ ಟೆಂಡರ್ ನೀಡಲು 40 ಲಕ್ಷ ಲಂಚ ಪಡೆಯುವ ಸಂದರ್ಭದಲ್ಲಿ ಲೋಕಾಯುಕ್ತ ಪೋಲಿಸರ ಕೈಗೆ ಸಿಕ್ಕಿ ಹಾಕಿಕೊಂಡಿದ್ದರು. ಹೀಗಾಗಿ ಪೊಲೀಸ್ ವಿಚಾರಣೆಯು ನಡೆದಿದ್ದು ಪ್ರಾಥಮಿಕ ವಿಚಾರಣೆ ವೇಳೆ ತಂದೆ ವಿರೂಪಾಕ್ಷಪ್ಪ ಸಲುವಾಗಿ ಹಣ ಪಡೆದಿರುವುದು ಎಂದು ತಿಳಿದು ಬಂದಿತ್ತು.
ಮುಂದುವರೆದ ತನಿಖೆ: ಪೊಲೀಸರು ಪ್ರಶಾಂತ್ ಮಾಡಾಳ್ ಜೊತೆ ಮತ್ತೋರ್ವ ಆರೋಪಿ ಸುರೇಂದ್ರ ಎಂಬುವವರನ್ನು ಕೂಡ 3 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದರು. ಅಲ್ಲದೆ, ತಂದೆ ಪರವಾಗಿ ಟೆಂಡರ್ ನೀಡಲು ದೂರುದಾರರಿಂದ ಲಂಚ ಪಡೆದಿರುವುದು ಸತ್ಯವಾ? ಲಂಚ ಪಡೆಯಲು ಅಪ್ಪ ವಿರುಪಾಕ್ಷಪ್ಪ ಸೂಚನೆ ನೀಡಿದ್ದರಾ ಎಂಬುದು ತಂದೆ-ಮಗನನ್ನು ತನಿಖಾಧಿಕಾರಿಗಳು ವಿಚಾರಣೆ ನಡೆಸಿದ್ದರು. ಜೊತೆಗೆ ಲೋಕಾಯುಕ್ತ ಪೊಲೀಸರ ಮುಂದೆ, ವಿಚಾರಣೆಗೂ ಹಾಜರಾಗಿದ್ದಾರೆ. ಇನ್ನು ಈ ಕುರಿತು ತನಿಖೆ ಮುಂದುವರೆಯುತ್ತಲೇ ಇದೆ.
ಇದನ್ನೂ ಓದಿ: ಲೋಕಾ ಮುಂದೆ ಹಾಜರಾದ ಶಾಸಕ ವಿರೂಪಾಕ್ಷಪ್ಪ ಹಾಗೂ ಪುತ್ರ ಪ್ರಶಾಂತ್ ಮಾಡಾಳ್