ದಾವಣಗೆರೆ: ರೈತರೊಬ್ಬರ ತೋಟಕ್ಕೆ ನುಗ್ಗಿದ ದುಷ್ಕರ್ಮಿಗಳು 1,500ಕ್ಕೂ ಹೆಚ್ಚು ಅಡಿಕೆ ಗಿಡಗಳನ್ನು ಮನಬಂದಂತೆ ಕೊಚ್ಚಿ ಹಾಕಿರುವ ಘಟನೆ ಹೊನ್ನಾಳಿ ತಾಲ್ಲೂಕಿನ ಮುಕ್ತೇನಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಪರಮೇಶಪ್ಪ, ನಾಗಮ್ಮ ದಂಪತಿ ಎರಡು ಎಕರೆ ಜಮೀನಿನಲ್ಲಿ ಸುಮಾರು ಎರಡು ವರ್ಷದಿಂದ ಒಂದೂವರೆ ಸಾವಿರಕ್ಕೂ ಅಧಿಕ ಅಡಿಕೆ ಗಿಡಗಳನ್ನು ನೆಟ್ಟು ಪೋಷಣೆ ಮಾಡುತ್ತಿದ್ದರು. ಅಡಿಕೆಗೆ ಉತ್ತಮ ದರ ಸಿಗುತ್ತಿದೆ ಎಂದು ಭತ್ತದ ಬದಲು ಅಡಿಕೆ ಬೆಳೆದಿದ್ದರು. ಇನ್ನೆರಡು ವರ್ಷಗಳಾಗಿದ್ದರೆ ಫಸಲು ಬರುತ್ತಿತ್ತು. ಆದರೆ ಕಿಡಿಗೇಡಿಗಳ ಅಟ್ಟಹಾಸಕ್ಕೆ ಅಷ್ಟೂ ಗಿಡಗಳು ನಾಶವಾಗಿವೆ. ಇಡೀ ರೈತ ಕುಟುಂಬ ಕಣ್ಣೀರು ಹಾಕುತ್ತಿದೆ.
ರೈತ ಮಹಿಳೆ ನಾಗಮ್ಮ ಮಾತನಾಡಿ, "ನಮ್ಮ ಎರಡು ಎಕರೆ ಜಮೀನಿನಲ್ಲಿ ಅಡಿಕೆ ಗಿಡಗಳನ್ನು ನೆಟ್ಟಿದ್ದೆವು. ಇದರಲ್ಲಿ ಒಂದೂವರೆ ಎಕರೆಯಲ್ಲಿದ್ದ 1,500 ಗಿಡಗಳನ್ನು ಕಡಿದು ಹಾಕಿದ್ದಾರೆ. ನಾವು ಕಷ್ಟಪಟ್ಟು ಗೊಬ್ಬರ ಹಾಕಿ ಗಿಡಗಳನ್ನು ಬೆಳೆಸಿದ್ದೆವು. ಆದರೆ ಕಿಡಿಗೇಡಿಗಳು ಕೊಡಲಿಯಿಂದ ಗಿಡಗಳನ್ನು ನೆಲಕ್ಕುರಳಿಸಿದ್ದಾರೆ. ದುಷ್ಕರ್ಮಿಗಳನ್ನು ಬಂಧಿಸಿ ಶಿಕ್ಷಿಸಬೇಕು. ನಮಗೆ ನ್ಯಾಯ ಒದಗಿಸಿಕೊಡಿ" ಎಂದು ಕಣ್ಣೀರು ಸುರಿಸುತ್ತಾ ಮನವಿ ಮಾಡಿದರು.
ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಶ್ವಾನ ದಳ ಮತ್ತು ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಾಸನೆ ಕಂಡು ದಾರಿ ಪತ್ತೆ ಹಚ್ಚಲು ಹೊರಟಿದ್ದ ಶ್ವಾನ ದಳಕ್ಕೆ ಸ್ವಲ್ಪ ದೂರ ಕ್ರಮಿಸಿದ ಬಳಿಕ ದಾರಿ ಸಿಗದೇ ಮಧ್ಯದಲ್ಲೆ ನಿಂತಿತ್ತು. ಆದರೂ ಕೆಲವು ಸುಳಿವು ಸಿಕ್ಕಿದೆ ಎನ್ನಲಾಗಿದೆ.
ಗ್ರಾಮದ ಮುಖಂಡ ಮರಳು ಸಿದ್ದಪ್ಪ ಪ್ರತಿಕ್ರಿಯಿಸಿ, "ಎರಡು ಎಕರೆ ಜಮೀನಿನಲ್ಲಿ ಹಾಕಿದ್ದ ಅಡಿಕೆ ಗಿಡಗಳ ನಾಶ ಮಾಡಲಾಗಿದೆ. ಇದನ್ನು ಯಾರು ಮಾಡಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ. ಹದಿನೈದು ನೂರು ಗಿಡಗಳು ನಾಶವಾಗಿವೆ. ಆ ಬಡ ಕುಟುಂಬ ಬಹಳ ಕಷ್ಟಪಟ್ಟು ತೋಟ ಬೆಳೆಸಿದ್ದರು. ಇಂಥ ನೀಚ ಕೃತ್ಯಕ್ಕೆ ತಕ್ಕ ಶಿಕ್ಷಿ ವಿಧಿಸಬೇಕು" ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಹಿಜಾಬ್ ನಿಷೇಧ ವಾಪಸ್ ನಮ್ಮ ಪಕ್ಷದ ನಿಲುವು: ಸಚಿವ ಸತೀಶ್ ಜಾರಕಿಹೊಳಿ