ದಾವಣಗೆರೆ : ಕುಡಿತಕ್ಕೆ ದಾಸರಾಗಿರುವವರು ಜಿಲ್ಲೆಯ ಕೈದಾಳೆ ಮಲ್ಲಿಕಾರ್ಜುನ ಸ್ವಾಮೀಜಿ ಸನ್ನಿಧಿಗೆ ಬಂದರೆ ಕುಡಿತ ಬಿಡುತ್ತಾರೆ ಎಂಬ ನಂಬಿಕೆ ಇದೆ.
ನಗರದಿಂದ 15 ಕಿಲೋಮೀಟರ್ ದೂರದಲ್ಲಿರುವ ಈ ಸುಕ್ಷೇತ್ರದಲ್ಲಿ ಮೊದಲೆಲ್ಲ ಭಕ್ತರು ಬಾಯಿಗೆ ಮುದ್ರೆ ಹಾಕಿಸಿಕೊಳ್ಳುತ್ತಿದ್ದರು. ಸಕ್ಕರೆ ಕಾಯಿಲೆ ಇರುವವರೆಗೆ ತೊಂದರೆಯಾಗುವ ಕಾರಣದಿಂದ ದೀಕ್ಷೆ ಹಾಗೂ ರುದ್ರಾಕ್ಷಿ ಮಾಲೆ ಹಾಕಿ ಗಂಟೆ ಹೊಡೆದು ದೇವರ ಮೇಲೆ ಪ್ರಮಾಣ ಮಾಡಿದ್ರೆ ಸಾಕು ಮದ್ಯಪ್ರಿಯರು ಇನ್ಯಾವ ಜನ್ಮಕ್ಕೂ ಕುಡಿತದ ಬಗ್ಗೆ ಆಲೋಚನೆ ಮಾಡುವುದಿಲ್ಲವಂತೆ.
ಪ್ರತಿವರ್ಷ ಶಿವರಾತ್ರಿ ಅಮವಾಸ್ಯೆಯಾಗಿ ಐದು ದಿನಗಳ ನಂತರ ರಥೋತ್ಸವ ನಡೆಯುತ್ತದೆ. ರಥೋತ್ಸವದ ದಿನ ಇಲ್ಲಿ ನೂರಾರು ಜನ ಮದ್ಯಕ್ಕೆ ದಾಸರಾದವರನ್ನು ಕರೆ ತರಲಾಗುತ್ತದೆ. ಹೀಗೆ ಬಂದವರು ದೀಕ್ಷೆ ಕೊಡುವಾಗ ಓಡಿ ಹೋದ ಘಟನೆಗಳು ಅನೇಕ ಇವೆ.
ಆದರೆ, ಇಲ್ಲಿ ದೀಕ್ಷೆ ಪಡೆದು ಮರಳಿ ಕುಡಿತಕ್ಕೆ ಶರಣಾದವರು ಕಮ್ಮಿ. ಹೀಗೆ ಮತ್ತೆ ಕುಡಿದರೆ ಅನಾಹುತ ಕಟ್ಟಿಟ್ಟ ಬುತ್ತಿ ಎಂಬುದು ಇಲ್ಲಿನವರ ನಂಬಿಕೆ. ಈ ಹಿನ್ನೆಲೆಯಲ್ಲಿ ಎಷ್ಟೋ ಮಹಿಳೆಯರು ತಮ್ಮ ಗಂಡಂದರಿಗೆ ಗೊತ್ತಾಗದಂತೆ ಇಲ್ಲಿಗೆ ಕರೆದುಕೊಂಡು ಬಂದು ದೀಕ್ಷೆ ಕೊಡಿಸುತ್ತಾರೆ.