ದಾವಣಗೆರೆ : ಮಾಜಿ ಸಚಿವ ವಿ ಸೋಮಣ್ಣನವರು ಕಾಂಗ್ರೆಸ್ ಬರುವುದಕ್ಕೆ ಪಕ್ಷದಲ್ಲಿ ಜಾಗವಿರಬೇಕಲ್ವಾ? ಈ ಬಗ್ಗೆ ತೀರ್ಮಾನ ಮಾಡಲು ಹೈಕಮಾಂಡ್ ಇದೆ. ಅವರು ಏನ್ ಮಾಡುತ್ತಾರೆ ನೋಡೋಣ ಎಂದು ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಹೇಳಿದ್ದಾರೆ.
ನಗರದಲ್ಲಿ ಭಾನುವಾರ ಮಾಧ್ಯಮಗಳೊಂದಿಗೆ ವಿ. ಸೋಮಣ್ಣ ಬಿಜೆಪಿ ತೊರೆದು ಕಾಂಗ್ರೆಸ್ ಸೇರಲು ಮುಂದಾಗಿರುವ ವಿಚಾರವಾಗಿ ಪ್ರತಿಕ್ರಿಯಿಸಿದರು. ಮೊದಲಿಂದ ಏನು ಸೋಮಣ್ಣ ನಮ್ಮ ಪಕ್ಷದಲ್ಲಿ ಇರಲಿಲ್ಲ. ಜನತಾ ದಳ ಪಕ್ಷದಲ್ಲಿದ್ದು, ಬಳಿಕ ಕಾಂಗ್ರೆಸ್ಗೆ ಬಂದಿದ್ದರು. ಇದೀಗ ಬಿಜೆಪಿಯಲ್ಲಿದ್ದಾರೆ. ಪಕ್ಷ ಸೇರುವ ಬಗ್ಗೆ ಕೆಪಿಸಿಸಿ ಅಧ್ಯಕ್ಷರು, ಪಕ್ಷದವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಅನ್ನೋದನ್ನು ನೋಡೋಣ. ಬಿಜೆಪಿ ಮತ್ತು ಜೆಡಿಎಸ್ ಎರಡು ಪಕ್ಷಗಳಿಂದ ಕಾಂಗ್ರೆಸ್ಗೆ ಬರುತ್ತಿರುವುದು ಪ್ಲಸ್ ಪಾಯಿಂಟ್ ಆಗಿದೆ. ಮುಂಬರುವ ಎಂಪಿ ಚುನಾವಣೆಯಲ್ಲಿ ಗೆಲುವು ಸಾಧಿಸಲು ಎಲ್ಲಾರೂ ಬೇಕಾಗುತ್ತಾರೆ ಎಂದು ತಿಳಿಸಿದರು.
ಜಾತಿ ಗಣತಿ ವರದಿ ಮೊದಲು ಬಿಡುಗಡೆಯಾಗಲಿ: ಜಾತಿ ಗಣತಿ ವರದಿಯಲ್ಲಿ ಏನಿದೆ ಎನ್ನುವುದು ರಿಲೀಸ್ ಆದ ಮೇಲೆ ಮಾತನಾಡೋಣ. ಈಗ ಮುಂಚಿತವಾಗಿಯೇ ಮಾತನಾಡುವುದು ಸರಿಯಲ್ಲ. ಮಹಾಸಭಾದ ನಿನ್ನೆ ಮೀಟಿಂಗ್ನಲ್ಲಿ ಜಾತಿ ಗಣತಿ ವರದಿ ಬಿಡುಗಡೆಗೆ ವಿರೋಧ ಮಾಡಿದ್ದಾರೆ. ಒಬ್ಬರದ್ದೂ ಒಂದೊಂದು ಅಭಿಪ್ರಾಯ ಬರುತ್ತಿದೆ. ಒಕ್ಕಲಿಗರು, ಲಿಂಗಾಯತರು ಸೇರಿದಂತೆ ಹಲವು ಜಾತಿಗಳ ವಿರೋಧ ಇದೆ ಎಂದರು.
ಡಿಕೆಶಿ ಸಿಬಿಐ ಪ್ರಕರಣ ವಾಪಸ್ ಪಡೆದ ವಿಚಾರ : ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಸಿಬಿಐ ಪ್ರಕರಣವನ್ನು ಕ್ಯಾಬಿನೆಟ್ನಲ್ಲಿ ವಾಪಸ್ಸು ಪಡೆದ ವಿಚಾರವಾಗಿ ಮಾತನಾಡಿದ ಎಸ್.ಎಸ್ ಮಲ್ಲಿಕಾರ್ಜುನ್ ಅವರು, ವಿರೋಧ ಪಕ್ಷದವರು ವಿರೋಧ ಮಾಡುವುದಕ್ಕೆ ಇರೋದು. ನಮ್ಮ ಮನೆಯಲ್ಲಿ ಕಾರ್ಯಕ್ರಮ ಇದ್ದುದರಿಂದ ನಾನು ಕ್ಯಾಬಿನೆಟ್ನಲ್ಲಿ ಇರಲಿಲ್ಲ. ಸ್ಪೀಕರ್ ಅನುಮತಿ ಇಲ್ಲದೆ ದೂರು ನೀಡಿದ್ದಾರೆ ಎಂದು ಈಗಾಗಲೇ ನಮ್ಮ ನಾಯಕರು ಕೂಡ ಹೇಳಿದ್ದಾರೆ ಎಂದು ಹೇಳಿಕೆ ಕೊಟ್ಟರು.
ಶಾಮನೂರು ಶಿವಶಂಕರಪ್ಪ ಕುರಿತು ಹೆಚ್. ವಿಶ್ವನಾಥ್ ಟೀಕೆ ಬಗ್ಗೆ : ಕಾಂಗ್ರೆಸ್ ಹಿರಿಯ ಶಾಸಕ ಹಾಗು ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪರನ್ನು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಟೀಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಅವರಿಗೆ ಏನ್ ಗೊತ್ತಿದೆ? ಈಗ ಯಾವ ಪಕ್ಷದಲ್ಲಿ ಇದ್ದಾರೆ? ವಿಶ್ವನಾಥ್ ಒಬ್ಬ ಸಮಯ ಸಾಧಕರು. ಎಲ್ಲಾ ಪಕ್ಷ ಅಡ್ಡಾಡಿಕೊಂಡು ಬಂದು ಈಗ ಯಾವ ಪಕ್ಷದಲ್ಲಿ ಇದಾರೆ ಎಂದು ಹಳ್ಳಿಹಕ್ಕಿ ವಿರುದ್ಧ ಕಿಡಿಕಾರಿದರು.
ಇದನ್ನೂ ಓದಿ : ಲೋಕಸಭೆ ಚುನಾವಣೆ: ನಿಖಿಲ್ ಕುಮಾರಸ್ವಾಮಿ-ವಿಜಯೇಂದ್ರ ಸಹೋದರರಂತೆ ಒಟ್ಟಾಗಿ ಹೋಗುತ್ತಾರೆ; ಹೆಚ್ಡಿಕೆ