ದಾವಣಗೆರೆ : ಸಂಪುಟ ವಿಸ್ತರಣೆಯ ಚುಟುವಟಿಕೆಗಳು ಗರಿಗೆದರಿರುವ ನಡುವೆ ಜಿಲ್ಲೆಯಲ್ಲಿ ಗೆದ್ದ ಆರು ಜನ ಬಿಜೆಪಿ ಶಾಸಕರಲ್ಲಿ ಒಬ್ಬರಿಗಾದರೂ ಸಚಿವ ಸ್ಥಾನ ನೀಡಬೇಕೆಂಬ ಬೇಡಿಕೆ ಜೋರಾಗಿಯೇ ಕೇಳಿ ಬರುತ್ತಿದೆ. ಈಗಾಗಲೇ ಸಿಎಂ ರಾಜಕೀಯ ಕಾರ್ಯದರ್ಶಿಯಾಗಿರುವ ಎಂ.ಪಿ. ರೇಣುಕಾಚಾರ್ಯ ಆಕಾಂಕ್ಷಿಗಳ ಪಟ್ಟಿಯಲ್ಲಿ ಮೂಂಚೂಣಿಯಲ್ಲಿದ್ದು, ಮುಖ್ಯಮಂತ್ರಿಗಳು ಯಾರಿಗೆ ಮಣೆ ಹಾಕುತ್ತಾರೆ ಅನ್ನೋದನ್ನು ಕಾದು ನೋಡಬೇಕಾಗಿದೆ.
ಜೆಡಿಎಸ್ - ಕಾಂಗ್ರೆಸ್ ನೇತೃತ್ವದ ಸರ್ಕಾರ ಅಸ್ತಿತ್ವದಲ್ಲಿದ್ದಾಗಲೂ ಹೊರಗಿನವರೇ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಮತ್ತೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು ಯಡಿಯೂರಪ್ಪ ಮುಖ್ಯಮಂತ್ರಿ ಆದ ಮೇಲೂ ಕೆ.ಎಸ್. ಈಶ್ವರಪ್ಪ, ಅಂದರೆ ಹೊರಗಿನವರೇ ಜಿಲ್ಲಾ ಉಸ್ತುವಾರಿ ಮಂತ್ರಿಯಾದರು. ಈಗಲಾದರೂ ಜಿಲ್ಲೆಯಿಂದ ಆರಿಸಿ ಬಂದಿರುವ ಆರು ಶಾಸಕರ ಪೈಕಿ ಒಬ್ಬರಿಗಾದರೂ ಸಚಿವ ಸ್ಥಾನ ನೀಡಬೇಕು ಎಂಬ ಆಗ್ರಹ ಜಿಲ್ಲೆಯ ಬಿಜೆಪಿ ಶಾಸಕರದ್ದಾಗಿದೆ.
ಹಲವು ವರ್ಷಗಳಿಂದಲೂ ಬಿಜೆಪಿಗೆ ನಿಷ್ಠ ಮತ್ತು ಸಂಘ ಪರಿವಾರದ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ಎಸ್. ಎ. ರವೀಂದ್ರನಾಥ್, ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ, ಹೊನ್ನಾಳಿ ಶಾಸಕ ಎಂ. ಪಿ. ರೇಣುಕಾಚಾರ್ಯ, ಜಗಳೂರು ಶಾಸಕ ಎಸ್. ವಿ. ರಾಮಚಂದ್ರ, ಮಾಯಕೊಂಡ ಶಾಸಕ ಎಂ. ಲಿಂಗಪ್ಪ, ಹರಪನಹಳ್ಳಿ ಶಾಸಕ ಕರುಣಾಕರ ರೆಡ್ಡಿ ಇದ್ದರೂ, ಸಚಿವ ಸ್ಥಾನಕ್ಕಾಗಿ ತೀವ್ರ ಲಾಬಿ ನಡೆಸುತ್ತಿರುವುದು ರೇಣುಕಾಚಾರ್ಯ. ಈ ನಡುವೆ ಎಸ್. ಎ. ರವೀಂದ್ರನಾಥ್, ಮಾಡಾಳು ವಿರೂಪಾಕ್ಷಪ್ಪ ಸಚಿವ ಸ್ಥಾನದ ಆಕಾಂಕ್ಷಿಗಳು ಎಂದು ಹೇಳಿದರೂ ಬಹಿರಂಗವಾಗಿ ಎಲ್ಲಿಯೂ ಒತ್ತಡ ಹಾಕುವ ಕೆಲಸ ಮಾಡುತ್ತಿಲ್ಲ.
ಶಾಸಕ ಎಂ.ಲಿಂಗಪ್ಪ ಹಾಗೂ ಎಸ್. ವಿ. ರಾಮಚಂದ್ರ ನಮಗೆ ತಾಲೂಕು ಅಭಿವೃದ್ಧಿ ಆದರೆ ಸಾಕು, ಅನುದಾನ ಬಂದರೆ ಸಾಕು ಎಂದುಕೊಂಡು ಸುಮ್ಮನಿದ್ದಾರೆ. ಉಪಚುನಾವಣೆಯಲ್ಲಿ ಗೆದ್ದ 10 ಶಾಸಕರಿಗೆ ಸಚಿವ ಸ್ಥಾನ ನೀಡಲಾಗುತ್ತಿದೆ ಎಂದು ಹೇಳಲಾಗುತ್ತಿದೆಯಾದರೂ, ಉಳಿದ ಮೂರು ಸ್ಥಾನಗಳಲ್ಲಿ ಒಬ್ಬರಿಗಾದರೂ ಸಚಿವ ಸ್ಥಾನ ನೀಡಬೇಕೆಂಬ ಒತ್ತಡ ಹೆಚ್ಚುತ್ತಿದೆ. ಈ ಬಾರಿಯೂ ಸೂಕ್ತ ಸ್ಥಾನ ಸಿಗದಿದ್ದರೆ ಮತ್ತೆ ಬೇರೆ ಜಿಲ್ಲೆಯವರೇ ಉಸ್ತುವಾರಿ ಮಂತ್ರಿಯಾಗುವುದು ನಿಶ್ಚಿತ ಎಂದು ಹೇಳಲಾಗುತ್ತಿದ್ದು, ಇದು ಜಿಲ್ಲೆಯ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರಿಗೂ ಅಸಮಾಧಾನ ತಂದಿದೆ.