ದಾವಣಗೆರೆ: ನಾನು ಜೆಡಿಎಸ್ನಿಂದ ಬಂದವನು, ಆದರೆ ಬಿಜೆಪಿಯಲ್ಲಿ ಖುಷಿಯಾಗಿದ್ದೇನೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಹಾಗೂ ರೇಷ್ಮೆ ಸಚಿವ ನಾರಾಯಣ ಗೌಡ ಸಂತಸ ವ್ಯಕ್ತಪಡಿಸಿದರು.
ದಾವಣಗೆರೆಯಲ್ಲಿ ಸಚಿವ ಸ್ಥಾನ ನೀಡುವ ಬಗ್ಗೆ ಮಾತನಾಡಿದ ಅವರು, ನಾಲ್ಕು ಖಾತೆಗಳು ಖಾಲಿ ಇವೆ. ಮುಖ್ಯಮಂತ್ರಿಗಳು ಹೈಕಮಾಂಡ್ ಸೂಚನೆಯಂತೆ ಸ್ಥಾನ ನೀಡುತ್ತಾರೆ. ಎಲ್ಲರಿಗೂ ಒಳ್ಳೆಯ ಸ್ಥಾನ ಸಿಗುತ್ತದೆ, ಅದರಲ್ಲಿ ಯಾವುದೇ ಅನುಮಾನ ಇಲ್ಲ ಎಂದರು.
ಪರಿಷತ್ ಸದಸ್ಯ ವಿಶ್ವನಾಥ್ ಸ್ವಪಕ್ಷದ ಬಗ್ಗೆ ಮಾತನಾಡುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಆ ಬಗ್ಗೆ ನಾನು ಮಾತನಾಡುವುದಿಲ್ಲ, ನಾವು ಇಬ್ಬರು ಒಂದೇ ಪಕ್ಷದಲ್ಲಿ ಇದ್ದವರು, ಜೊತೆಗೆ ಬಂದವರು. ಹಿರಿಯರಿಗೆ ಬುದ್ಧಿ ಹೇಳುವುದಕ್ಕೆ ಆಗುತ್ತಾ? ಎಂದರು. ಮೈಸೂರು ಭಾಗಕ್ಕೆ ವಿಜಯೇಂದ್ರ ಬರಲಿ, ಹಳೇ ಮೈಸೂರು ಭಾಗದಲ್ಲಿ ಪಕ್ಷ ಕಟ್ಟಬೇಕು. ಅದಕ್ಕೆ ವಿಜಯೇಂದ್ರ ಬಂದರೆ ಸಾಕಷ್ಟು ಒಳ್ಳೆಯದಾಗುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.
ಖೇಲೋ ಇಂಡಿಯಾಕ್ಕೆ ರಾಜ್ಯದಲ್ಲಿ ತಯಾರಿ: ಕರ್ನಾಟಕದಲ್ಲಿ ಮುಂದಿನ ವರ್ಷ ಖೇಲೋ ಇಂಡಿಯಾ ಬರುತ್ತಿದ್ದು, ಅದಕ್ಕೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತೇವೆ. 75ರ ಸುವರ್ಣ ವರ್ಷಕ್ಕೆ 75 ಮಕ್ಕಳನ್ನು ತೆಗೆದುಕೊಂಡು 2024 ರ ಓಲಿಂಪಿಕ್ಗೆ ರೆಡಿ ಮಾಡುತ್ತಿದ್ದೇವೆ. ಕಲೆ ಇರುವ ಮಕ್ಕಳು ಸಾಕಷ್ಟು ಇದ್ದರೆ, ಅವರಿಗೆ ಪ್ರೋತ್ಸಾಹ ನೀಡುವ ಕೆಲಸ ನಾವು ಮಾಡಬೇಕಿದ್ದು, ಕ್ರೀಡೆಗೆ ಸಂಬಂಧಿಸಿದಂತೆ ಎಲ್ಲ ಇಲಾಖೆಯಲ್ಲಿ ಶೇ 2ರಷ್ಟು ಮೀಸಲಾತಿ ಇಡಲಾಗಿದೆ ಎಂದರು.
ಆಟದ ಮೈದಾನ ಇಲ್ಲದಿದ್ದರೆ ಲೈಸೆನ್ಸ್ ರದ್ದು:
ಶಾಲೆಗಳಲ್ಲಿ ಮಕ್ಕಳು ಒಂದು ಗಂಟೆ ಕಡ್ಡಾಯವಾಗಿ ಆಟವಾಡಲು ಸಮಯ ನೀಡಬೇಕು ಎಂದು ಸಚಿವರಿಗೆ ಪತ್ರ ರವಾನಿಸಲಾಗಿದೆ. ಆಟದ ಮೈದಾನ ಇಲ್ಲದ ಶಾಲೆಗಳ ಲೈಸೆನ್ಸ್ ರದ್ದು ಮಾಡುವಂತೆ ಸಿಎಂಗೆ ಮನವಿ ಮಾಡಲಾಗಿದೆ ಎಂದರು.