ದಾವಣಗೆರೆ : ಇದು ಹಿಂದೂಸ್ಥಾನ. ಧರ್ಮಾಚರಣೆಯನ್ನು ಮನೆ, ಮಸೀದಿ ಹಾಗೂ ದೇವಸ್ಥಾನಗಳಲ್ಲಿ ಮಾಡಿಕೊಳ್ಳಿ. ಅದನ್ನು ಬಿಟ್ಟು ಶಾಲಾ ಕಾಲೇಜುಗಳಲ್ಲಿ ಧರ್ಮ ತಂದಿದ್ದು, ಕೇವಲ ಆರು ಮಕ್ಕಳು. ಇದನ್ನು ಕಾಂಗ್ರೆಸ್ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಆರೋಪಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಅರಕೆರೆ ಗ್ರಾಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹಿಜಾಬ್ ಗದ್ದಲಕ್ಕೆ ನೇರ ಕಾರಣ ಕಾಂಗ್ರೆಸ್. ಶಾಲೆ ಅಂದ್ರೆ ಸಮವಸ್ತ್ರ ಧರಿಸಬೇಕು. ಹಿಜಾಬ್ ವಿಚಾರದಲ್ಲಿ ಗದ್ದಲ ಸರಿಯಲ್ಲ. ಹಿಂದು-ಮುಸ್ಲಿಂ ನಡುವೆ ಜಗಳ ಹಚ್ಚಿ ಕಾಂಗ್ರೆಸ್ ಸರ್ವನಾಶವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಉಡುಪಿಯ ಶಾಲೆಯ ಬಹುತೇಕ ಮಕ್ಕಳು ಸಮವಸ್ತ್ರದಲ್ಲಿ ಬರಲು ಒಪ್ಪಿದ್ದಾರೆ. ಆದ್ರೆ, ಆರು ಮಕ್ಕಳಿಂದ ಇದು ವಿವಾದವಾಗಿದೆ. ಹಿಜಾಬ್ ಬೇಡ, ಆದ್ರೆ ಶಾಲೆಯಲ್ಲಿ ಸರಸ್ವತಿ ಪೂಜೆ ಮಾಡುವುದನ್ನ ಕೆಲವರು ಪ್ರಶ್ನಿಸುತ್ತಿದ್ದಾರೆ.ಇನ್ನೇನು ಪಾಕಿಸ್ತಾನಕ್ಕೆ ಹೋಗಿ ಸರಸ್ವತಿ ಪೂಜೆ ಮಾಡಲು ಆಗುತ್ತಾ? ಎಂದು ಸಚಿವ ಈಶ್ವರಪ್ಪ ಪ್ರಶ್ನಿಸಿದರು.
ಕಾಂಗ್ರೆಸ್ ಸರ್ವನಾಶ: ಹಿಂದು-ಮುಸ್ಲಿಮರು ಸಹೋದರರಂತೆ ಬಾಳಬೇಕು. ಅದು ಕಾಂಗ್ರೆಸ್ಗೆ ಬೇಕಾಗಿಲ್ಲ. ಸಿದ್ದರಾಮಯ್ಯ ಅವರು ನಾನು ಗೋ ಮಾಂಸ ತಿನ್ನುತ್ತೇನೆ ಎಂದು ಹೇಳಿದ್ದಾರೆ. ಗೋ ಮಾತೆಯ ಶಾಪದಿಂದ ಅವರು ಸರ್ಕಾರ ಕಳೆದುಕೊಂಡರು. ಕೃಷ್ಣ ಮಠಕ್ಕೆ ಹೋಗಲ್ಲ ಎಂದು ಹೇಳಿಕೆ ನೀಡಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತರು ಎಂದು ಟಾಂಗ್ ನೀಡಿದರು.
ರೇಣುಕಾಚಾರ್ಯಗೆ ಸಚಿವ ಸ್ಥಾನ?: ರೇಣುಕಾಚಾರ್ಯ ಅವರನ್ನು ಹೊಗಳಿದ್ದೇನೆ ಎಂದರೆ ಅವರಿಗೆ ಸಚಿವ ಸ್ಥಾನ ನೀಡ್ಬೇಕಾಗುತ್ತಾ?. ಎಲ್ಲಾ ಶಾಸಕರು ಒಳ್ಳೆ ಕೆಲಸ ಮಾಡಿದ್ದಾರೆ. ಸಚಿವ ಸ್ಥಾನಕ್ಕೆ ರೇಣುಕಾಚಾರ್ಯ ಅರ್ಹರಾಗಿದ್ದಾರೆ. ಆದರೆ, ಅದನ್ನು ನಿರ್ಧರಿಸಲು ಹೈಕಮಾಂಡ್ ಇದೆ.
ಹೈಕಮಾಂಡ್ ಯಾರು ಒಳ್ಳೆಯ ಕೆಲಸ ಮಾಡ್ತಾರೆ, ಯಾರಿಂದ ಸರ್ಕಾರ ಉಳಿಯುತ್ತದೆ ಅಂತಹವರಿಗೆ ಸಚಿವ ಸ್ಥಾನ ನೀಡಬಹುದು. ಬೇರೆ ಪಕ್ಷದಿಂದ ಬಂದ 15 ಜನರಿಗೆ ಸಚಿವ ಸ್ಥಾನ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದರಿಂದ ಆ 15 ಜನರಿಗೆ ಸಚಿವ ಸ್ಥಾನ ನೀಡಿದರು. ಮುಂದಿನ ದಿನಗಳಲ್ಲಿ ಎಲ್ಲವೂ ಸರಿ ಆಗುತ್ತದೆ ಎಂದು ಸಚಿವ ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಕಾಲೇಜು ಆವರಣದಲ್ಲಿ ಹಿಜಾಬ್, ಕೇಸರಿ ಶಾಲು ನಡೆಯಲ್ಲ: ಆರಗ ಜ್ಞಾನೇಂದ್ರ