ದಾವಣಗೆರೆ: ಸಿದ್ದರಾಮಯ್ಯನವರು ಸಿಎಂ ಆಗಿದ್ದಾಗ ಟೇಕಾಫ್ ಆಗಿದ್ರಾ, ಹಂಗೆ ಆಕಾಶದಲ್ಲಿ ಹಾರ್ಕೊಂಡು ಹೋಗಿದ್ರಾ? ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಸಿದ್ದು ವಿರುದ್ಧ ಗುಡುಗಿದರು.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಬಸವರಾಜ್ ಬೊಮ್ಮಾಯಿಯವರು ಅಧಿಕಾರ ವಹಿಸಿಕೊಂಡು ಎಂಟತ್ತು ದಿನ ಆಗಿಲ್ಲ. ನಾಲ್ಕು ಜಿಲ್ಲೆ ಪ್ರವಾಸ ಮಾಡಿ ಅಭಿವೃದ್ಧಿಯ ಬಗ್ಗೆ ಚಿಂತನೆ ಮಾಡ್ತಾ ಇದ್ದಾರೆ. ಬೆಂಗಳೂರು ನಗರದ ಬಗ್ಗೆ ಮೀಟಿಂಗ್ ಮಾಡಿ 6 ಸಾವಿರ ಕೋಟಿ ರೂ ಅನುದಾನ ಕೊಡ್ತೀವಿ ಎಂದಿದ್ದಾರೆ. ಕೋವಿಡ್ ನಿಯಂತ್ರಣಕ್ಕೆ ಶತಪ್ರಯತ್ನ ಮಾಡ್ತಿದ್ದಾರೆ. ಅಧಿಕಾರಿಗಳ ಜೊತೆ ಸತತ ಸಭೆ ನಡೆಸುತ್ತಿದ್ದಾರೆ. ಇದೆಲ್ಲಾ ಅಭಿವೃದ್ಧಿಯಲ್ವಾ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯನವರನ್ನು ಪ್ರಶ್ನಿಸಿದರು.
'ಸಿದ್ದರಾಮಯ್ಯನವರು ಒಮ್ಮೆಯಾದ್ರೂ ಗಡಿ ಜಿಲ್ಲೆಗಳಿಗೆ ಹೋಗಿದ್ದಾರಾ?'
ಬಿಜೆಪಿ ಸರ್ಕಾರದ ಆಡಳಿತ ಬಗ್ಗೆ ಭವಿಷ್ಯ ಹೇಳುವ ಸಿದ್ದರಾಮಯ್ಯನವರು ಒಮ್ಮೆಯಾದ್ರೂ ಗಡಿ ಜಿಲ್ಲೆಗಳಿಗೆ ಹೋಗಿ ಪರಿಶೀಲನೆ ನಡೆಸಿದ್ದಾರಾ, ಎಲ್ಲೋ ಕೂತು ಏನೋ ಒಂದು ಹೇಳೋದು ಬಿಡಲಿ ಎಂದರು.
ಮಾಜಿ ಸಿಎಂ ವಸ್ತುಸ್ಥಿತಿ ಬಗ್ಗೆ ಸಲಹೆ ನೀಡಲಿ, ಅದನ್ನು ಬಿಟ್ಟು ಸರ್ಕಾರ ಉಳಿಯಲ್ಲ, ಟೇಕಾಫ್ ಆಗಿಲ್ಲ ಅನ್ನೋದು ಸರಿಯಲ್ಲ. ಸರ್ಕಾರ ಬೀಳುತ್ತೆ ಅಂತ ಇವರೇನು ಭವಿಷ್ಯ ಹೇಳ್ತಾರಾ, ಕಾಂಗ್ರೆಸ್ನಲ್ಲಿ ಎಲ್ಲರೂ ಕಿತ್ತಾಡ್ತಾ ಇದ್ದಾರೆ. ಮೊದಲು ಇವರ ಭವಿಷ್ಯ ಇವರು ನೋಡಿಕೊಳ್ಳಲಿ, ಸಿಎಂ ಆಗ್ತಾರ ಇಲ್ಲ ಅಂತ ಭವಿಷ್ಯ ಹೇಳಿಕೊಳ್ಳಲಿ ಎಂದು ಸಚಿವರು ಗರಂ ಆದರು.
ಇದನ್ನೂ ಓದಿ: ಈ ಸರ್ಕಾರ ಅವಧಿ ಪೂರ್ಣಗೊಳಿಸುವುದು ಡೌಟ್: ಸಿದ್ದರಾಮಯ್ಯ
ಇಂದಿರಾ ಕ್ಯಾಂಟಿನ್ ಹೆಸರು ಬದಲಾವಣೆ ವಿಚಾರ:
ಗುರುವಾರ ಕ್ಯಾಬಿನೆಟ್ ಮೀಟಿಂಗ್ ಇದ್ದು, ಅಲ್ಲಿ ಸಾಧಕ-ಬಾಧಕ ಚರ್ಚೆ ಮಾಡುತ್ತೇವೆ. ಕೊನೆಯಲ್ಲಿ ಈ ಬಗ್ಗೆ ಸಿಎಂ ನಿರ್ಧಾರ ಮಾಡುತ್ತಾರೆ ಎಂದು ಹೇಳಿದರು.