ದಾವಣಗೆರೆ: ವಿಜಯೇಂದ್ರ ಹಾನಗಲ್ನಲ್ಲಿ ಚುನಾವಣೆ ಸ್ಪರ್ಧೆ ಬಗ್ಗೆ ಮಾಹಿತಿ ಇಲ್ಲ. ಅವರು ರಾಜ್ಯ ಬಿಜೆಪಿಯ ಉಪಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ನಮ್ಮ ನಾಯಕರು, ರಾಜ್ಯಾಧ್ಯಕ್ಷರು, ಮುಖ್ಯಮಂತ್ರಿ ಕೂತು ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಸಚಿವ ಭೈರತಿ ಬಸವರಾಜ್ ಹೇಳಿದರು.
ಮಾಜಿ ಸಚಿವ ದಿವಂಗತ ಸಿಎಂ ಉದಾಸಿ ಅವರ ಅಕಾಲಿಕ ಮರಣದಿಂದ ತೆರವಾದ ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬಿ.ವೈ.ವಿಜಯೇಂದ್ರ ಕಣಕ್ಕಿಳಿಯಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.
ಇದರ ಬೆನ್ನಲ್ಲೇ ದಾವಣಗೆರೆಯಲ್ಲಿ ಪ್ರತಿಕ್ರಿಯಿಸಿದ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್, ವಿಜಯೇಂದ್ರ ಹಾನಗಲ್ನಲ್ಲಿ ಚುನಾವಣೆ ಸ್ಪರ್ಧೆ ಬಗ್ಗೆ ಮಾಹಿತಿ ಇಲ್ಲ. ಅವರು ರಾಜ್ಯ ಬಿಜೆಪಿಯ ಉಪಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಸ್ಪರ್ಧೆಗೆ ಟಿಕೆಟ್ ಕೊಡುವುದು ಬಿಡುವುದು ಹೈಕಮಾಂಡ್ಗೆ ಬಿಟ್ಟ ವಿಚಾರ. ಯಾವುದೇ ಚರ್ಚೆಯಾಗಿಲ್ಲ, ನಮ್ಮ ಗಮನಕ್ಕೆ ಏನೂ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.
ಇಷ್ಟು ದಿನಗಳ ಕಾಲ ಇದ್ದ ಸಚಿವರು ನಮ್ಮಂತೆ ದಾವಣಗೆರೆ ನಗರವನ್ನು ಸುತ್ತಾಡಿ ಈ ರೀತಿ ಕಾಮಗಾರಿಗಳನ್ನು ವೀಕ್ಷಿಸಿದ್ದಾರಾ? ಜಿಲ್ಲೆಯ ತಾಲೂಕುಗಳಿಗೆ ಭೇಟಿ ನೀಡಿದ್ದಾರಾ ಎಂದು ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರಿಗೆ ಟಾಂಗ್ ನೀಡಿದರು.
ಸಿಟಿ ರೌಂಡ್ಸ್ ಹಾಕಿ ಕಾಮಗಾರಿ ಪರಿಶೀಲನೆ: ಇಂದು ಸಚಿವ ಭೈರತಿ ಬಸವರಾಜ್ ದಾವಣಗೆರೆ ನಗರದಾದ್ಯಂತ ರೌಂಡ್ಸ್ ಹಾಕಿ ಸ್ಮಾರ್ಟ್ ಸಿಟಿ ಕಾಮಗಾರಿಯನ್ನು ಪರಿಶೀಲಿಸಿದರು. ಕೆಎಸ್ಆರ್ಟಿಸಿ ಹಾಗೂ ಖಾಸಗಿ ಬಸ್ ನಿಲ್ದಾಣಗಳ ಕಾಮಗಾರಿ ವೀಕ್ಷಿಸಿ ಶಾಮನೂರು ನೂತನ ಚಿತಾಗಾರವನ್ನು ಪರಿಶೀಲನೆ ನಡೆಸಿದರು.