ದಾವಣಗೆರೆ : ಪೈಪ್‌ಲೈನ್ ಒಡೆದ ಪರಿಣಾಮ ಲಕ್ಷಾಂತರ ಲೀಟರ್ ನೀರು ಪೋಲಾದ ಘಟನೆ ಜಿಲ್ಲೆಯ ಹರಿಹರ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ 4ರ ದೊಡ್ಡಬಾತಿ ಗ್ರಾಮದ ಬಳಿ ನಡೆದಿದೆ.
22 ಕೆರೆಗಳಿಗೆ ನೀರುಣಿಸುವ ಮಹತ್ವಾಕಾಂಕ್ಷಿ ಯೋಜನೆ ಇದಾಗಿದೆ. ಕಳೆದ 12 ವರ್ಷಗಳ ಹಿಂದೆ ಜಿಲ್ಲೆಯ ಬರಗಾಲ ಪೀಡಿತ ಪ್ರದೇಶಗಳಿಗೆ ನೀರುಣಿಸುವ ಸಲುವಾಗಿ ಸರ್ಕಾರ ಈ ಕಾಮಗಾರಿ ಕೈಗೆತ್ತಿಕೊಂಡಿತ್ತು.
22 ಕೆರೆಗಳಿಗೆ ನೀರು ತುಂಬಿಸುವ ಈ ಪೈಪ್‌ಲೈನ್ ಒಡೆದ ಪರಿಣಾಮ ನೀರು ವ್ಯರ್ಥವಾಗಿದೆ. ಅಧಿಕಾರಿಗಳ ಬೇಜವಾಬ್ದಾರಿ ಹಾಗೂ ಕಳಪೆ ಗುಣಮಟ್ಟದ್ದಾಗಿರುವುದರಿಂದಲೇ ಈ ಘಟನೆ ಸಂಭವಿಸಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಸಂಸದ ಜಿ ಎಂ ಸಿದ್ದೇಶ್ವರ್, ಕಳೆದ 6 ವರ್ಷಗಳಿಂದಲೂ ಪದೇಪದೆ ಪೈಪ್‌ಲೈನ್ ಒಡೆದು ಹೋಗುತ್ತಲೇ ಇದೆ.
ಅಧಿಕಾರಿಗಳು ಒಂದೆರಡು ವರ್ಷ ಇರ್ತಾರೆ, ಆಮೇಲೆ ವರ್ಗಾವಣೆ ಆಗಿ ಹೋಗ್ತಾರೆ. ಕಾಮಗಾರಿ ಗುಣಮಟ್ಟದಿಂದ ಕೂಡಿಲ್ಲ. ಕಳಪೆ ಕಾಮಗಾರಿ ನಡೆಸಿದ್ದು, ಸಾಬೀತಾದ್ರೆ ಅಂತಹ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಿ. ಇಲ್ಲದಿದ್ದರೆ ನಾನೇ ಸಿಎಂ ಹಾಗೂ ನೀರಾವರಿ ಇಲಾಖೆ ಸಚಿವರ ಜೊತೆ ಮಾತನಾಡುತ್ತೇವೆ. ನೀವು ಮೊದಲು ವರದಿ ನೀಡಿ ಎಂದು ಅಧಿಕಾರಿಗಳಿಗೆ ಖಡಕ್ ಆಗಿ ಸೂಚಿಸಿದ್ದಾರೆ.
ರಾಜನಹಳ್ಳಿ ಸಮೀಪದ ತುಂಗಾಭದ್ರಾ ನದಿ ಬಳಿ ಜಾಕ್ವೆಲ್ ನಿರ್ಮಿಸಲಾಗಿದೆ. ಆಮೆಗತಿಯ ಕಾಮಗಾರಿ ಹಾಗೂ ಕಳಪೆ ಗುಣಮಟ್ಟದಿಂದ ಕೂಡಿದ್ದ ಆರೋಪವೂ ಆಗಾಗ ಕೇಳಿ ಬರುತ್ತಿದೆ. ಸಿರಿಗೆರೆಯ ಶಿವಾಚಾರ್ಯ ಮಹಾಸ್ವಾಮೀಜಿ ಅವರ ವಿಶೇಷ ಪ್ರಯತ್ನದಿಂದಾಗಿ ಈ ಯೋಜನೆ ಕಾರ್ಯಾರಂಭಗೊಂಡಿತ್ತು.
ಯೋಜನೆ ಶುರುವಾದಾಗಿನಿಂದಲೂ ಪೈಪ್‌ಲೈನ್ ಹಾಗೂ ತಾಂತ್ರಿಕ ಸಮಸ್ಯೆಗಳಿಂದಾಗಿ ನೀರು ಹರಿಸಲು ಸಾಧ್ಯವಾಗಿಲ್ಲ. ಸಂಸದ ಜಿ ಎಂ ಸಿದ್ದೇಶ್ವರ್ ತೀವ್ರ ಒತ್ತಡ ಹಾಕಿದ ಪರಿಣಾಮ ಅಧಿಕಾರಿಗಳು ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಿದ್ದಾರೆ. ಬರಗಾಲ ಪೀಡಿತ ಪ್ರದೇಶಗಳ ಜನರಲ್ಲಿಯೂ ನೀರು ಸಿಗುತ್ತೆ ಎಂಬ ಆಶಾಭಾವನೆ ಮೂಡಿತ್ತು.