ದಾವಣಗೆರೆ : ಬೇಕಾಬಿಟ್ಟಿ ಬಾಡಿಗೆ ಕೇಳುತ್ತಿದ್ದ ಆಟೋರಿಕ್ಷಾ ಚಾಲಕರಿಗೆ ಬಿಸಿ ಮುಟ್ಟಿಸಲು ಮುಂದಾಗಿರುವ ನಗರ ಪೊಲೀಸ್ ಇಲಾಖೆ ಆಗಸ್ಟ್15ರೊಳಗೆ ಮೀಟರ್ ಅಳವಡಿಸುವಂತೆ ಸೂಚನೆ ನೀಡಿದೆ. ತಪ್ಪಿದ್ದಲ್ಲಿ ಡ್ರೈವಿಂಗ್ ಲೈಸೆನ್ಸ್ ರದ್ದುಪಡಿಸುವುದಾಗಿ ಎಚ್ಚರಿಸಿದೆ.
ನಗರದಲ್ಲಿ ಆಟೋ ಚಾಲಕರು ನಿಗದಿತ ದರಕ್ಕಿಂತ ಹೆಚ್ಚಿಗೆ ಹಣ ಕೇಳುತ್ತಿದ್ದಾರೆ ಎಂಬ ದೂರು ಕೇಳಿ ಬಂದ ಹಿನ್ನೆಲೆ ನೂತನ ಎಸ್ಪಿ ಸಿ ಬಿ ರಿಷ್ಯಂತ್ ಇವೆಲ್ಲಕ್ಕೂ ಕಡಿವಾಣ ಹಾಕಲು ಮುಂದಾಗಿದ್ದಾರೆ. ಆಗಸ್ಟ್ 15ರೊಳಗೆ ಮೀಟರ್ ಅಳವಡಿಸದಿದ್ದರೆ ಡ್ರೈವಿಂಗ್ ಲೈಸೆನ್ಸ್ ರದ್ದುಪಡಿಸುವ ಎಚ್ಚರಿಕೆ ನೀಡಿದ್ದಾರೆ. ಎಸ್ಪಿಯವರ ಆದೇಶಕ್ಕೆ ಆರ್ಟಿಒ ಅಧಿಕಾರಿಗಳು ಸಹ ಕೈಜೋಡಿಸಿದ್ದಾರೆ.
ಈಗಾಗಲೇ ಕೊರೊನಾ ಹಾಗೂ ಲಾಕ್‌ಡೌನ್‌ನಿಂದಾಗಿ ಹೈರಾಣಾಗಿರುವ ಆಟೋ ಚಾಲಕರು ಮೀಟರ್ ಫರ್ಮಾನಿಗೆ ಚಿಂತೆಗೀಡಾಗಿದ್ದಾರೆ. ಗ್ಯಾಸ್ ದರ, ಎಫ್ಸಿ, ವಿಮೆ ದರಗಳು ಗಗನಕ್ಕೇರಿವೆ. ಜೀವನ ಕಷ್ಟಕರವಾಗಿದೆ. 40 ರೂ. ಕನಿಷ್ಠ ದರ ನಿಗದಿಪಡಿಸಿ ಬಳಿಕ ಮೀಟರ್ ಅಳವಡಿಸುವಂತೆ ಆಟೋ ಚಾಲಕರು ಮನವಿ ಮಾಡಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಒಂದು ಭಾಗವಾಗಿದ್ದಾಗಿನಿಂದ ಇಂದಿನವರೆಗೂ ದಾವಣಗೆರೆಯಲ್ಲಿ ಮೀಟರ್ ಅಳವಡಿಕೆಗೆ ಅಧಿಕಾರಿಗಳು ಸಾಕಷ್ಟು ಪ್ರಯತ್ನ ಪಟ್ಟು ವಿಫಲರಾಗಿದ್ದಾರೆ. ಆದ್ರೇ, ಇದೀಗ ನೂತನ ಎಸ್ಪಿ ರಿಷ್ಯಂತ್ ಅವರು ಮೀಟರ್ ಕಾನೂನು ತಂದಿರುವುದು ಕೆಲ ಆಟೋ ಚಾಲಕರಿಗೆ ವಿರುದ್ಧವಾಗಿದ್ದು, ಕೆಲವರು ಸ್ವಾಗತಿಸಿದ್ದಾರೆ.