ದಾವಣಗೆರೆ: ಇಲ್ಲಿನ ಮಹಾನಗರ ಪಾಲಿಕೆ ಮೇಯರ್ ಚುನಾವಣೆಗೆ ಇದೇ 19ರಂದು ದಿನಾಂಕ ನಿಗದಿಯಾಗಿದೆ. ಸಮಬಲ ಸದಸ್ಯರನ್ನು ಹೊಂದಿರುವ ಕಾಂಗ್ರೆಸ್ ಹಾಗೂ ಬಿಜೆಪಿ ತಂತ್ರಗಾರಿಕೆ ಶುರು ಮಾಡಿವೆ.
ಪಾಲಿಕೆಯ ಮೇಯರ್, ಉಪಮೇಯರ್ ಮತ್ತು 4 ಸ್ಥಾಯಿಸಮಿತಿಗಳಿಗೆ ಸದಸ್ಯರನ್ನು ಆಯ್ಕೆ ಮಾಡಲು ಫೆ.19ರಂದು ಬೆಳಗ್ಗೆ 11.30ಕ್ಕೆ ಪಾಲಿಕೆಯ ಸಭಾಂಗಣದಲ್ಲಿ ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಲಿದೆ ಎಂದು ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಹಿನ್ನೆಲೆ 45 ಸದಸ್ಯ ಬಲದ ಪಾಲಿಕೆಯಲ್ಲಿ 22 ಕಾಂಗ್ರೆಸ್, 17 ಬಿಜೆಪಿ ಓರ್ವ ಜೆಡಿಎಸ್ ಸದಸ್ಯೆ, ಐವರು ಪಕ್ಷೇತರ ಸದಸ್ಯರಿದ್ದಾರೆ. ಇದರಲ್ಲಿ ಈಗಾಗಲೇ ನಾಲ್ವರು ಪಕ್ಷೇತರರು ಸಿಎಂ ಯಡಿಯೂರಪ್ಪ ಸಮ್ಮುಖದಲ್ಲಿ ಬಿಜೆಪಿಗೆ ಮರು ಸೇರ್ಪಡೆಯಾಗಿದ್ದಾರೆ. ಬಿಜೆಪಿ ಸಂಖ್ಯಾಬಲವನ್ನು 21ಕ್ಕೆ ಹೆಚ್ಚಿಸಿಕೊಂಡಿದೆ. ಚುನಾವಣೆ ನಡೆದು 2 ತಿಂಗಳು ಕಳೆದಿದ್ದರೂ ಮೇಯರ್ ಚುನಾವಣೆ ನಡೆಯದಿರುವುದಕ್ಕೆ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದರು.