ದಾವಣಗೆರೆ/ಬಳ್ಳಾರಿ: ಮಂಗಳೂರಿನಲ್ಲಿ ಪೌರತ್ವ ಕಾಯ್ದೆ ವಿರುದ್ಧ ನಡೆದ ಗಲಾಟೆ ಪೂರ್ವನಿಯೋಜಿತ ಕುತಂತ್ರ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಬಳ್ಳಾರಿ ಜಿಲ್ಲೆ ಹರಪನಹಳ್ಳಿಯಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಂಗಳೂರು ಪ್ರತಿಭಟನೆ ಪೂರ್ವನಿರ್ಧರಿತವಾಗಿದ್ದು, ಇದರ ಬಗ್ಗೆ ಸಿಸಿಟಿವಿ ಕ್ಯಾಮರಾದಲ್ಲಿ ಪುರಾವೆ ದೊರೆತಿದೆ. ಪೊಲೀಸ್ ಇಲಾಖೆ ಹಾಗೂ ಸರ್ಕಾರದ ಯಾವುದೇ ಪಾತ್ರವಿಲ್ಲ ಎನ್ನುವುದು ಸ್ಪಷ್ಟವಾಗಿದೆ ಎಂದು ಹೇಳಿದರು.
ಮಂಗಳೂರಿನಲ್ಲಿ ನಡೆಯುತ್ತಿರುವ ಗಲಬೆಗೆ ವಿರೋಧ ಪಕ್ಷಗಳು ಸರ್ಕಾರ ಹಾಗೂ ಪೊಲೀಸ್ ಇಲಾಖೆ ವಿರುದ್ಧ ನೀಡಿದ ಹೇಳಿಕೆ ಹಿಂಪಡೆಯಬೇಕು. ಜೊತೆಗೆ ರಾಜ್ಯದ ಜನತೆಯ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು. ಇನ್ನು ಗೋಲಿಬಾರ್ನಲ್ಲಿ ಮೃತಪಟ್ಟವರಿಗೆ ಸರ್ಕಾರ ಘೋಷಣೆ ಮಾಡಿದ ಪರಿಹಾರ ಹಿಂಪಡೆದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಮುಸುಕು ಧರಿಸಿ ಗೂಂಡಾಗಿರಿ ಮಾಡಿದವರೇ ಸತ್ತಿದ್ದಾರೆ. ಕೊಲೆಗಡುಕರಿಗೆ ಪರಿಹಾರ ಕೊಡಲು ಸಾಧ್ಯವೇ ಎಂದು ಪ್ರಶ್ನಿಸಿದರು.