ದಾವಣಗೆರೆ: ಜಿಲ್ಲೆಯ ಹರಿಹರ ತಾಲೂಕು ಮಲೇಬೆನ್ನೂರಿನ ಜುಮ್ಮಾ ಮಸೀದಿ ಕಾರ್ಯಕಾರಿ ಸಮಿತಿ ಭ್ರಷ್ಟಾಚಾರ ನಡೆಸಿದೆ. ಈ ಹಿನ್ನೆಲೆ ತನಿಖೆ ನಡೆಸಿದ ರಾಜ್ಯ ವಕ್ಫ್ ಮಂಡಳಿ ಸಮಿತಿಯನ್ನು ಅಮಾನತು ಮಾಡಿ ಆಡಳಿತಾಧಿಕಾರಿಯನ್ನು ನೇಮಕ ಮಾಡಲು ಆದೇಶಿಸಿದೆ ಎಂದು ವಕೀಲ ನಿಸಾರ್ ಅಹಮದ್ ಖಾನ್ ತಿಳಿಸಿದರು.
ಈ ಬಗ್ಗೆ ಮಾತನಾಡಿದ ಅವರು, ಜುಮ್ಮಾ ಮಸೀದಿಯ ಶಾದಿಮಹಲ್, ಜಾಮೀಯಾ ವಿದ್ಯಾಸಂಸ್ಥೆಯಲ್ಲಿ ಸುಮಾರು 1,97,28,593 ರೂ ಹಣಕಾಸಿನ ಅವ್ಯವಹಾರ ನಡೆದಿದೆ. ಕಾರ್ಯಕಾರಿ ಸಮಿತಿ ಈ ಹಣಕಾಸಿನ ಅವ್ಯವಹಾರ ನಡೆಸಿದೆ. ಈ ಬಗ್ಗೆ ದೂರು ನೀಡಿದ ಹಿನ್ನಲೆ ತನಿಖೆ ನಡೆಸಲಾಗಿತ್ತು. ಇದೀಗ ಆ ದುರುಪಯೋಗ ಹಣವನ್ನು ವಸೂಲಿ ಮಾಡಲು ಕ್ರಮ ಜರುಗಿಸುವಂತೆ ವಕ್ಫ್ ಮಂಡಳಿ ಆದೇಶಿಸಿದೆ. ಮಸೀದಿಯ ಕಾರ್ಯಕಾರಿ ಸಮಿತಿಯ ಸದಸ್ಯರು ಜಮೀನಿಗೆ ಬರುವಂತ ಆದಾಯವನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಕರಾರನ್ನು ಉಲ್ಲಂಘನೆ ಮಾಡಿದ್ದಾರೆ. ಶಾದಿಮಹಲ್ ನಿರ್ಮಾಣ, ಖಬರಸ್ತಾನ್, ಕಾಂಪೌಂಡ್ ನಿರ್ಮಾಣ, ಶಾದಿ ಮಹಲ್ ಬಾಡಿಗೆ ವಂಚನೆ, ಸರ್ಕಾರದ ಅನುದಾನ ಮತ್ತು ಸಾರ್ವಜನಿಕರಿಂದ ಪಡೆಯಲಾಗಿದ್ದ ದೇಣಿಗೆಯನ್ನು ಯಾವುದೇ ಸರಿಯಾದ ಲೆಕ್ಕಪತ್ರ ಇಡದೆ ಹಣ ದುರುಪಯೋಗಪಡಿಸಿಕೊಂಡಿದ್ದಾರೆ ಎಂದರು.
ಈ ಬಗ್ಗೆ ದೂರು ನೀಡಿದಾಗ ವಕ್ಫ್ ಮಂಡಳಿ 5 ವರ್ಷಗಳ ಕಾಲ ಲೆಕ್ಕ ಪರಿಶೋಧನೆ ಮಾಡಿಸುವಂತೆ ಹಾಗೂ ಸಮಿತಿಯನ್ನು ಅಮಾನತ್ತಿನಲ್ಲಿಟ್ಟು ಆಡಳಿತಾಧಿಕಾರಿಯನ್ನು ನೇಮಿಸಲು ಶಿಫಾರಸ್ಸು ಮಾಡಿದೆ. ಆದ್ದರಿಂದ ಈ ಕೂಡಲೇ ಆಡಳಿತಾಧಿಕಾರಿಯನ್ನು ನೇಮಿಸಬೇಕೆಂದು ಮನವಿ ಮಾಡಿದರು.