ದಾವಣಗೆರೆ: ಬೆಳಕಿನ ಹಬ್ಬ ದೀಪಾವಳಿಯನ್ನು ದೇಶದೆಲ್ಲೆಡೆ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಹೊಸ ಉಡುಗೆ ತೊಟ್ಟು, ಪಟಾಕಿ ಸಿಡಿಸಿ ಮನೆಮಂದಿಯೆಲ್ಲ ಒಟ್ಟಾಗಿ ಹಬ್ಬ ಆಚರಿಸುವುದು ಪದ್ಧತಿ. ಆದರೆ, ಜಿಲ್ಲೆಯ ಲೋಕಿಕೆರೆ ಗ್ರಾಮಸ್ಥರು ಮಾತ್ರ ದೀಪಾವಳಿ ಹಬ್ಬವನ್ನು ಆಚರಿಸುವುದಿಲ್ಲ.
ಕಳೆದೆರಡು ಶತಮಾನಗಳಿಂದ ಈ ಊರ ಜನರು ದೀಪಾವಳಿ ಹಬ್ಬ ಆಚರಿಸುವುದನ್ನೇ ನಿಲ್ಲಿಸಿ ಬಿಟ್ಟಿದ್ದಾರೆ. ಹಿಂದೆ ಹಬ್ಬದ ದಿನ ಕೆಡುಕು ಸಂಭವಿಸಿದ ಹಿನ್ನೆಲೆಯಲ್ಲಿ ದೀಪಾವಳಿ ಆಚರಿಸುವುದನ್ನು ಕೈಬಿಟ್ಟಿದ್ದಾರೆ. ಹಬ್ಬದ ಸಂದರ್ಭದಲ್ಲಿ ಯಾವುದೇ ಶುಭ ಕಾರ್ಯವನ್ನೂ ಕೈಗೊಳ್ಳದೇ ತಲೆತಲಾಂತರಗಳಿಂದಲೂ ಅದೇ ಪದ್ಧತಿಯನ್ನು ಮುಂದುವರಿಸಿಕೊಂಡು ಬರಲಾಗುತ್ತದೆ ಎನ್ನುತ್ತಾರೆ ಗ್ರಾಮಸ್ಥರು.
ಪರಿಶಿಷ್ಟ ಸಮುದಾಯದವರು, ನಾಯಕರು ಹಾಗೂ ಕುರುಬರೇ ಹೆಚ್ಚಿರುವ ಈ ಗ್ರಾಮದಲ್ಲಿ ದೀಪಾವಳಿ ಹಬ್ಬಾಚರಣೆ ಮಾಡುವ ಬದಲು ಕರಾಳ ದಿನ ಆಚರಿಸಲಾಗುತ್ತದೆ!. ಸುಮಾರು ಎರಡು ನೂರಕ್ಕೂ ಹೆಚ್ಚು ವರ್ಷಗಳಿಂದ ಈ ಪದ್ದತಿಯನ್ನು ಗ್ರಾಮದ ಹಿರಿಯರು ನಡೆಸಿಕೊಂಡು ಬರುತ್ತಿದ್ದಾರೆ. ಕೆಲವರು ಗ್ರಾಮದ ಆಂಜನೇಯನ ತೇರಿನ ಸಮಯ ಹಾಗೂ ಇನ್ನೂ ಕೆಲವರು ವಿಜಯದಶಮಿ ಸಂದರ್ಭದಲ್ಲಿ, ಮತ್ತಷ್ಟು ಜನರು ಮಹಾಲಯ ಅಮಾವಾಸ್ಯೆ ದಿನ ಹಿರಿಯರ ಹಬ್ಬ ನೆರವೇರಿಸುತ್ತಾರೆ. ಆ ಸಮಯದಲ್ಲಿ ದೀಪಾವಳಿ ರೀತಿಯೇ ಹಬ್ಬಾಚರಣೆ ಮಾಡುತ್ತಾರೆ. ಇದನ್ನು ಹೊರತುಪಡಿಸಿ ದೀಪಾವಳಿ ದಿನದಂದು ಹಬ್ಬ ಆಚರಿಸಿದರೆ, ಕೆಡುಕಾಗುವುದೇ ಹೆಚ್ಚು ಎನ್ನುವುದು ಗ್ರಾಮಸ್ಥರ ನಂಬಿಕೆ. ದೀಪಾವಳಿ ಹಬ್ಬದ ವೇಳೆ ಆಚರಣೆಗಳನ್ನು ಕೈಬಿಟ್ಟು, ಬೇರೆ ಊರುಗಳಲ್ಲಿ ನೆಲೆಸಿರುವ ಸಂಬಂಧಿಕರ ಮನೆಗಳಿಗೆ ತೆರಳಿ ಊಟ, ಉಪಚಾರ ಮಾಡಿಕೊಂಡು ಬರುತ್ತಾರೆ. ಆದ್ರೆ, ಲೋಕಿಕೆರೆ ಗ್ರಾಮದಲ್ಲಿ ಮಾತ್ರ ದೀಪಾವಳಿ ಆಚರಿಸುವುದಿಲ್ಲ ಎಂದು ಗ್ರಾಮಸ್ಥರು ತಿಳಿಸಿದರು.
ಮುಖ್ಯ ಕಾರಣ: ಎರಡು ಶತಮಾನಗಳ ಹಿಂದೆ, ಹಬ್ಬ ಆಚರಿಸಲು ಲೋಕಿಕೆರೆ ಗ್ರಾಮದ ಕೆಲ ಹಿರಿಯರು, 'ಕಾಶಿ ಹುಲ್ಲು' ತರಲು ಕಾಡಿಗೆ ತೆರಳಿದ್ದರು. ಹುಲ್ಲು ತರಲು ಹೋದ ಯಾರೊಬ್ಬರೂ ಕೂಡ ಮರಳಿ ಬರಲಿಲ್ಲ. ಗ್ರಾಮಸ್ಥರೆಲ್ಲ ಎಲ್ಲೆಡೆ ಹುಡುಕಿದರೂ ಅವರರಲ್ಲಿ ಒಬ್ಬರೂ ಪತ್ತೆಯಾಗಿಲ್ಲವಂತೆ. ನಂತರ ದಿನಗಳಲ್ಲಿ ಗ್ರಾಮದಲ್ಲಿ ದೀಪಾವಳಿ ಆಚರಣೆ ಮಾಡುವುದನ್ನೇ ಕೈಬಿಡಲಾಯಿತು. ಈ ನಿರ್ಧಾರ ಮಾಡಿದ್ದು ಗ್ರಾಮದ ಹಿರಿಯರು. ಒಂದು ವೇಳೆ ಗ್ರಾಮದಲ್ಲಿ ಅದನ್ನು ಮೀರಿಯೂ ಹಬ್ಬ ಆಚರಿಸಿದರೆ ಕೆಡುಕಾಗುತ್ತದೆ ಎನ್ನುವುದು ಗ್ರಾಮಸ್ಥರು ನಂಬಿಕೆ. ಇನ್ನೂ ಕೆಲವರು ಗ್ರಾಮದಲ್ಲಿ ಹಬ್ಬ ಆಚರಣೆ ಮಾಡಲು ಮುಂದಾದ ವೇಳೆ ಕೆಡುಕಾಗಿರುವ ಉದಾಹರಣೆಗಳೂ ಇವೆಯಂತೆ.
ಗ್ರಾಮದ ಹಿರಿಯ ಮುಖಂಡರಾದ ರಾಮಸ್ವಾಮಿ ಹಾಗೂ ಒಬಳಪ್ಪ ಪ್ರತಿಕ್ರಿಯಿಸಿ, "ಲೋಕಿಕೆರೆ ಗ್ರಾಮದಲ್ಲಿ ದೀಪಾವಳಿ ಹಬ್ಬ ಆಚರಿಸುವುದಿಲ್ಲ. ಕಾಶಿ ಹುಲ್ಲು ಹಾಗೂ ಹೂವು ತರಲು ಹೋದವರು ಹಿಂದಿರುಗಿ ಬಂದಿಲ್ಲ. ಹಬ್ಬ ಮಾಡಿದರೆ ಕೆಡುಕಾಗುತ್ತೆ ನಂಬಿಕೆಯಿಂದ ನಮ್ಮ ಮುತ್ತಾತನ ಕಾಲದಿಂದಲೂ ಹಬ್ಬದ ಆಚರಣೆ ಕೈಬಿಟ್ಟಿದ್ದೇವೆ. ನಾವು ರಾಮ ನವಮಿಯಂದು ಹಿರಿಯರ ಹಬ್ಬ ಮಾಡಿ, ವಿಶೇಷ ಹಬ್ಬ ಆಚರಣೆ ಮಾಡುತ್ತೇವೆ'' ಎಂದರು.
ಇದನ್ನೂ ಓದಿ: ಶಿವಮೊಗ್ಗ: ಮಲೆನಾಡ ಸಾಹಿತ್ಯ, ಸಾಂಸ್ಕೃತಿಕ ಕೇಂದ್ರವಾದ ಕರ್ನಾಟಕ ಸಂಘಕ್ಕೆ ರಾಜೋತ್ಸವ ಪ್ರಶಸ್ತಿ ಗರಿ