ದಾವಣಗೆರೆ: ಜಮೀನಿಗೆ ಸಂಬಂಧಪಟ್ಟ ದಾಖಲಾತಿಗಳನ್ನು ಮಾಡಿಸಿಕೊಡಲು ಲಂಚದ ಬೇಡಿಕೆ ಇಟ್ಟಿದ್ದ ಚನ್ನಗಿರಿ ತಾಲೂಕು ಕಚೇರಿಯ ಶಿರಸ್ತೇದಾರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಸುಧೀರ್ ಲೋಕಾಯುಕ್ತ ಬಲೆಗೆ ಬಿದ್ದಿರುವ ಅಧಿಕಾರಿ. ಲೋಹಿತ್ ಕುಮಾರ್ ಎಂಬುವರು ನೀಡಿದ ದೂರು ಹಿನ್ನೆಲೆ ದಾಳಿ ನಡೆಸಿದ ಅಧಿಕಾರಿಗಳು, ಈ ಅಧಿಕಾರಿಯನ್ನು ಬಲೆಗೆ ಕೆಡವಿದ್ದಾರೆ. ಲೋಹಿತ್ ಕುಮಾರ್ ಅವರ ಅಕ್ಕನ ಮಗಳಾದ ಮೇಘನಾಳ ಪತಿಯ ಊರಾದ ಮರಡಿ ಗ್ರಾಮದಲ್ಲಿ ಸರ್ವೇ ನಂಬರ್ 42/1 ರಲ್ಲಿ 0-07 ಎಕರೆ ಜಮೀನಿದೆ. ಈ ಜಮೀನಿನಲ್ಲಿ ಮೇಘನಾ ಅವರಿಗೆ ಬರಬೇಕಾದ ಗದ್ದೆಗೆ ಸಂಬಂಧಪಟ್ಟ ದಾಖಲಾತಿಗಳನ್ನು ಮಾಡಿಸುವ ಸಲುವಾಗಿ ಲೋಹಿತ್ ಕುಮಾರ್ ಸರ್ಕಾರಿ ಕಚೇರಿಗೆ ಓಡಾಡುತ್ತಿದ್ದರು.
ಆದರೆ, ಚನ್ನಗಿರಿ ತಾಲೂಕು ಕಚೇರಿಯ ಆರ್.ಆರ್.ಟಿ. ಶಾಖೆಯಲ್ಲಿ ಕೆಲಸ ಮಾಡುವ ಶಿರಸ್ತೇದಾರ್ ಸುಧೀರ್ ಸದರಿ ಜಮೀನಿನ ಪಹಣಿ ಮತ್ತು ಆಕಾರ್ ಬಂದ್ ವಿಸ್ತೀರ್ಣ ತಾಳೆ ಸರಿಪಡಿಸಿಕೊಡಲು ರೂ. 5,000 ಲಂಚದ ಹಣದ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಲೋಹಿತ್ ಕುಮಾರ್ ಅವರು ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಲೋಕಾಯುಕ್ತ ಪೊಲೀಸರು, ಲೋಹಿತ್ ಅವರಿಂದ 5,000 ಲಂಚದ ಹಣವನ್ನು ಸ್ವೀಕರಿಸುವಾಗ ಟ್ರ್ಯಾಪ್ ಮಾಡಿ ಬಲೆಗೆ ಬೀಳಿಸಿದ್ದಾರೆ.
ಲೋಕಾಯುಕ್ತ ಎಸ್ಪಿ ಎಂ.ಎಸ್.ಕೌಲಾಪೂರೆ ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿದ್ದು, ಲೋಕಾಯುಕ್ತ ಪೊಲೀಸ್ ನಿರೀಕ್ಷಕರಾದ ಹೆಚ್.ಎಸ್.ರಾಷ್ಟ್ರಪತಿ ಮತ್ತು ಮಧುಸೂದನ್ ಸಿಬ್ಬಂದಿ ಇದ್ದರು. ಆರೋಪಿ ಸುಧೀರ್ ಅವರನ್ನು ವಶಕ್ಕೆ ಪಡೆದ ಲೋಕಾಯುಕ್ತ ಅಧಿಕಾರಿಗಳು, ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ: ವಿಜಯಪುರ: ಕೆಬಿಜೆಎನ್ಎಲ್ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮೇಲೆ ಲೋಕಾಯುಕ್ತ ದಾಳಿ
ಆಲಮಟ್ಟಿಯ ಕೆಬಿಜೆಎನ್ಎಲ್ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಆಗಿರುವ ಶಿವಪ್ಪ ಮಂಜಿನಾಳ ಎಂಬುವರ ಮೇಲೆಯೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ವಿಜಯಪುರ ಲೋಕಾಯುಕ್ತ ಎಸ್ಪಿ ಹನುಮಂತರಾಯಪ್ಪ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಸುರೇಶ್ ರೆಡ್ಡಿ ನೇತೃತ್ವದ ಅಧಿಕಾರಿಗಳ ತಂಡವು ಆಲಮಟ್ಟಿಯ ರೂಮ್ವೊಂದರಲ್ಲಿ ವಾಸವಾಗಿದ್ದ ಎಇಇ ಮೇಲೆ ದಾಳಿ ಮಾಡಿ ಕಡತಗಳ ಪರಿಶೀಲನೆ ನಡೆಸಿದರು. ಕೆಬಿಜೆಎನ್ಎಲ್ ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಗುತ್ತಿಗೆದಾರನಿಗೆ ಬಿಲ್ ಮಂಜೂರಾತಿಗೆ 16 ಲಕ್ಷ ರೂ. ಲಂಚ ಕೇಳಿದ್ದರು. ಆರಂಭದಲ್ಲಿ 5 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಿ ಗುತ್ತಿಗೆದಾರ ಅಭಿಷೇಕ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಈ ದೂರು ಆಧರಿಸಿ ಲೋಕಾಯುಕ್ತ ದಾಳಿ ನಡೆದಿದೆ. ಎಇಇ ಕಾರು ಚಾಲಕನನ್ನು ಕೂಡ ಲೋಕಾಯುಕ್ತ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.