ದಾವಣಗೆರೆ: ನೂತನವಾಗಿ ಮದ್ಯದಂಗಡಿ ಆರಂಭಿಸಲು ಪರವಾನಿಗೆ ನೀಡಲು ಲಂಚದ ಬೇಡಿಕೆ ಇಟ್ಟು, ಲಂಚ ಸ್ವೀಕರಿಸುವ ವೇಳೆ ನಾಲ್ಕು ಜನ ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಅಬಕಾರಿ ಡಿ ಸಿ ಸ್ವಪ್ನ, ಪ್ರಥಮ ದರ್ಜೆ ಸಹಾಯಕ ಆಶೋಕ ಹೆಚ್.ಎಂ. ಹಾಗೂ ಹರಿಹರ ಅಬಕಾರಿ ವಲಯ ಕಚೇರಿಯ ಅಧಿಕಾರಿ ನಿರೀಕ್ಷಕರರಾದ ಶೀಲಾ, ದ್ವಿತೀಯ ದರ್ಜೆ ಸಹಾಯಕಿ ಶೈಲಶ್ರೀ ಲೋಕಾಯುಕ್ತ ಬಲೆಗೆ ಬಿದ್ದವರು.
ಹರಿಹರದ ನಿವಾಸಿ ಡಿ ಜಿ ರಘುನಾಥ ಅವರು ಹರಿಹರದಲ್ಲಿರುವ ತಮಗೆ ಸೇರಿದ ಡಿ.ಜಿ.ಆರ್. ಅಮ್ಯೂಸ್ಟಂಟ್ ಫಾರ್ಕ್ ಬಳಿ ನೂತನ ಮದ್ಯದಂಗಡಿಯನ್ನು ತೆರೆಯಲು ಅಬಕಾರಿ ಇಲಾಖೆಗೆ ಪರವಾನಿಗಾಗಿ ಅರ್ಜಿ ಸಲ್ಲಿಸಿದ್ದರು. ಲೈಸೆನ್ಸ್ ಮಾಡಿ ಕೊಡಲು ಅಬಕಾರಿ ಡಿಸಿಯವರಾದ ಸ್ವಪ್ನ, ಪ್ರಥಮ ದರ್ಜೆ ಸಹಾಯ ಆಶೋಕ ಹೆಚ್.ಎಂ. ಹಾಗೂ ಹರಿಹರ ಅಬಕಾರಿ ವಲಯ ಕಚೇರಿಯ ಅಧಿಕಾರಿ ನಿರೀಕ್ಷಕಿ ಶೀಲಾ, ದ್ವಿತೀಯ ದರ್ಜೆ ಸಹಾಯಕಿ ಶೈಲಶ್ರೀ ಅವರು ಡಿ.ಜಿ. ರಘುನಾಥ್ ಬಳಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಇದರಿಂದ ಬೇಸತ್ತ ಡಿ.ಜಿ. ರಘುನಾಥ ಅವರು ದಾವಣಗೆರೆ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ಕೊಟ್ಟಿದ್ದರು.
ಶನಿವಾರ ಪ್ರಥಮ ದರ್ಜೆ ಸಹಾಯ ಆಶೋಕ, ಹೆಚ್.ಎಂ. ರವರು ತಮ್ಮ ಕಚೇರಿಯಲ್ಲಿ ರಘುನಾಥ್ ಅವರಿಂದ 3 ಲಕ್ಷ ರೂ. ಗಳ ಲಂಚದ ಹಣ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ಬಲೆಗೆ ಕೆಡವಿದ್ದಾರೆ. ಇದರಲ್ಲಿ ಅಬಕಾರಿ ಡಿಸಿ ಸ್ವಪ್ನ, ಆಶೋಕ ಹೆಚ್.ಎಂ. ಶೀಲಾ, ಶೈಲ ಭಾಗಿಯಾಗಿರುವುದರಿಂದ ನಾಲ್ವರನ್ನು ಬಂಧಿಸಲಾಗಿದೆ. ಈ ದಾಳಿ ದಾವಣಗೆರೆ ಲೋಕಾಯುಕ್ತ ಎಸ್ಪಿ ಎಂ.ಎಸ್ ಕೌಲಾಪುರೆ ನೇತೃತ್ವದಲ್ಲಿ ಲೋಕಾಯುಕ್ತ ನಿರೀಕ್ಷಕರಾದ ಪ್ರಭು ಸೂರಿನ್, ಮಧುಸೂಧನ್ ಹಾಗೂ ಎಚ್ ಎಸ್ ರಾಷ್ಟ್ರಪತಿ ದಾಳಿ ನಡೆದಿದೆ.
ಬಿಲ್ ಮಂಜೂರಾತಿಗಾಗಿ ಲಂಚಕ್ಕೆ ಬೇಡಿಕೆ: ನಿನ್ನೆದಿನ ಶಿವಮೊಗ್ಗದಲ್ಲಿ ನಡೆದ ಘಟನೆಯಲ್ಲಿ ಸ್ಮಶಾನ ಅಭಿವೃದ್ದಿ ಕಾಮಗಾರಿ ಬಿಲ್ ಮಂಜೂರಾತಿಗೆ ಲಂಚ ಪಡೆಯುವಾಗ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೆಶಕ ಎಸ್.ಗೋಪಿನಾಥ್ ಎಂಬವರು ಲೋಕಾಯುಕ್ತ ಬಲೆಗೆ ಬಿದ್ದಿದ್ದರು. ಗುತ್ತಿಗೆದಾರ ರವಿಕುಮಾರ್ ಎಂಬವರಿಂದ ಗೋಪಿನಾಥ್ 15 ಸಾವಿರ ರೂಪಾಯಿ ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದರು. ಗುತ್ತಿಗೆದಾರ ರವಿಕುಮಾರ್ ಶಿವಮೊಗ್ಗ ತಾಲೂಕು ಬುಕ್ಲಾಪುರ ಗ್ರಾಮ ಹಾಗೂ ರಾಮಿನಕೊಪ್ಪ ಗ್ರಾಮಗಳ ಸ್ಮಶಾನ ನಿರ್ಮಾಣದ ಕಾಮಗಾರಿ ಕೈಗೊಂಡಿದ್ದರು. ಸಶ್ಮಾನ ನಿರ್ಮಾಣಕ್ಕಾಗಿ 20 ಲಕ್ಷ ರೂ ಹಾಗೂ ಬುಕ್ಲಾಪುರ ಗ್ರಾಮದ ಸ್ಮಶಾನಕ್ಕೆ 10 ಲಕ್ಷ ರೂ. ಬಿಡುಗಡೆ ಆಗಿತ್ತು. ಈ ಪೈಕಿ ಈವರೆಗೆ 7 ಲಕ್ಷ ರೂ. ಬಿಲ್ ಮಾತ್ರ ಬಂದಿತ್ತು. ಉಳಿದ 23 ಲಕ್ಷ ರೂ. ಹಣವನ್ನು ಸಮಾಜ ಕಲ್ಯಾಣಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿ ವರದಿ ಕೊಟ್ಟ ನಂತರ ಬಾಕಿ ಹಣ ಬಿಡುಗಡೆ ಮಾಡಬೇಕಿತ್ತು. ಇದರ ವರದಿ ನೀಡಲು ಗೋಪಿನಾಥ್ 15 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಇದನ್ನೂ ಓದಿ: ಲೋಕಾಯುಕ್ತ ದಾಳಿ: ₹20 ಸಾವಿರ ಲಂಚ, ಸಿಕ್ಕಿಬಿದ್ದ ಪೊಲೀಸ್ ಹೆಡ್ ಕಾನ್‌ಸ್ಟೇಬಲ್