ದಾವಣಗೆರೆ: ಮಧ್ಯಂತರ ಜಾಮೀನು ದೊರೆತ ಬೆನಲ್ಲೇ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ತಮ್ಮ ಸ್ವಕ್ಷೇತ್ರ ಚನ್ನಗಿರಿಯಲ್ಲಿ ಕಾಣಿಸಿಕೊಂಡಿದ್ದಾರೆ. ಚನ್ನಗಿರಿಯಲ್ಲಿ ಬೆಂಬಲಿಗರು ಮಾಡಾಳ್ ಅವರನ್ನು ಅದ್ದೂರಿಯಾಗಿ ಬರಮಾಡಿಕೊಂಡರು. ಚನ್ನಗಿರಿ ತಾಲೂಕಿನ ಚನ್ನೇಶಪುರ ಗ್ರಾಮದಲ್ಲಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪನವರು ಚನ್ನಕೇಶವ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು. ಬಳಿಕ ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತಿಸಿದರು.
ಗುರುವಾರ ನಡೆದ ಲೋಕಾಯುಕ್ತ ದಾಳಿ ಬಳಿಕ ಕಳೆದ ಆರು ದಿನಗಳಿಂದ ಶಾಸಕ ಮಾಡಾಳ್ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಇವರ ಪುತ್ರ ಪ್ರಶಾಂತ್ ಮಾಡಾಳ್ 40 ಲಕ್ಷ ರೂ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತರು ದಾಳಿ ನಡೆಸಿ, ಬಂಧಿಸಿದ್ದರು. ಬಳಿಕ ಕೋರ್ಟ್, ಅವರಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಶಾಸಕ ಮಾಡಾಳ್ ಪ್ರಕರಣ ಎ1 ಆರೋಪಿಯಾಗಿದ್ದರಿಂದ, ತಮ್ಮ ಬಂಧನ ಸಾಧ್ಯತೆ ಹಿನ್ನೆಲೆ ನಿರೀಕ್ಷಣಾ ಜಾಮೀನಿನ ಮೊರೆ ಹೋಗಿದ್ದರು. ಇಂದು ಹೈಕೋರ್ಟ್ ವಿಚಾರಣೆ ನಡೆಸಿ, ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಈ ಮೂಲಕ ಶಾಸಕರಿಗೆ ರಿಲೀಫ್ ಸಿಕ್ಕಿದೆ. ಈ ಬೆನ್ನಲ್ಲೇ ಸ್ವಕ್ಷೇತ್ರದಲ್ಲಿ ಕಂಡುಬಂದರು.
ಕಣ್ಣೀರು ಹಾಕಿದ ಶಾಸಕ: ಬೆಂಗಳೂರಲ್ಲಿ ಸಿಕ್ಕಿರುವ ಹಣಕ್ಕೂ ನನಗೆ ಸಂಬಂಧವಿಲ್ಲ, ನಾನು ಇದರಿಂದ ದೋಷಮುಕ್ತವಾಗಿ ಬರುತ್ತೇನೆಂದು ಎಂದು ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರು ಕಣ್ಣೀರು ಹಾಕಿದರು. ಚನ್ನಗಿರಿ ತಾಲೂಕಿನ ಚನ್ನೇಶಪುರ ಗ್ರಾಮದಲ್ಲಿ ಮಾತನಾಡಿದ ಅವರು, ನನ್ನ ಮೇಲೆ ಆರೋಪ ಬಂದಿದೆ, ಅದರಿಂದ ನಾನು ನೂರಕ್ಕೆ ನೂರು ದೋಷಮುಕ್ತವಾಗುತ್ತೇನೆ. ನಾನು ಯಾವುದೇ ಭ್ರಷ್ಟಾಚಾರದಲ್ಲಿ ಭಾಗಿಯಾಗಿಲ್ಲ, ಬೆಂಗಳೂರಲ್ಲಿ ಸಿಕ್ಕಿರುವ ಹಣಕ್ಕೂ ನನಗೆ ಸಂಬಂಧವಿಲ್ಲ, ನಾನು ಇದರಿಂದ ದೋಷಮುಕ್ತವಾಗಿ ಬರುತ್ತೇನೆ, ನಮ್ಮದು 125 ಎಕರೆ ಅಡಿಕೆ ತೋಟವಿದ್ದು, ಅದರ ಆದಾಯವಿದೆ. ಲೋಕಾಯುಕ್ತ ದಾಳಿ ಹಿಂದೆ ಯಾರ ಕೈವಾಡವಿದೆ ಎಂದು ನಾನು ಹೇಳಲಾರೆ. ಕೋರ್ಟ್ ಆದೇಶದಂತೆ 48 ಗಂಟೆಯೊಳಗೆ ನಾನು ಲೋಕಾಯುಕ್ತಕ್ಕೆ ಹಾಜರಾಗುತ್ತೇನೆ. ನನಗೆ ಇಲ್ಲಿವರೆಗೂ ಲೋಕಾಯುಕ್ತದಿಂದ ಯಾವುದೇ ನೋಟಿಸ್ ಬಂದಿಲ್ಲ. ನನ್ನ ಮೇಲೆ ಯಾವುದೇ ಆರೋಪ ಇಲ್ಲ. ಕೆಎಸ್‌ಡಿಎಲ್ ಸಂಸ್ಥೆ ಅಧ್ಯಕ್ಷ ಅನ್ನೋ ಕಾರಣಕ್ಕೆ ನನ್ನ ಹೆಸರು ಸೇರಿಸಿದ್ದಾರೆ, ನಾನು ಕೆಎಸ್ಡಿಎಲ್ಗೆ ಬಂದ ನಂತರ 1350 ಕೋಟಿ ವಹಿವಾಟು ಮಾಡಿದ್ದೇನೆ. ಸಂಸ್ಥೆಗೆ 250 ಕೋಟಿ ಲಾಭ ಮಾಡಿದ್ದೇನೆ. ನಿಗಮದಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ತಿಳಿಸಿದರು.
ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ ವಜಾ ಮಾಡಿದ ವಿಚಾರವಾಗಿ ಮಾತನಾಡಿದ ಅವರು ಹೈಕಮಾಂಡ್ ತೀರ್ಮಾನ ಸಮರ್ಥಿಸಿಕೊಂಡರು. ನಮ್ಮ ಪಕ್ಷದ ಹೈಕಮಾಂಡ್ ನಿರ್ಧಾರ ಸರಿ ಇದೆ, ನನ್ನ ಮೇಲೆ ಆರೋಪ ಕೇಳಿ ಬಂದಾಗ ಅವರು ತೆಗೆದುಕೊಂಡ ತೀರ್ಮಾನ ಸರಿ ಇದೆ. ನಾನು ದೋಷಮುಕ್ತನಾಗಿ ಪಕ್ಷಕ್ಕೆ ಮತ್ತೇ ಸೇರ್ಪಡೆಯಾಗುತ್ತೇನೆ ಎಂದರು.
ನಾನು ನನ್ನ ಮನೆಯಲ್ಲಿದ್ದೆ. ಎಲ್ಲರಿಗೂ ಪ್ರತಿಕ್ರಿಯೆ ನೀಡಲಾಗದೆ ಮೊಬೈಲ್ ಸ್ವಿಚ್ ಆಫ್ ಮಾಡಿದ್ದೆ. ನಾನು ಎಲ್ಲೂ ಹೋಗಿಲ್ಲ ಎಂದು ಕಾಂಗ್ರೆಸ್ನವರ ಪೋಸ್ಟರ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು. ಟಿಕೆಟ್ ವಿಚಾರ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು ಪಕ್ಷದ ಜೊತೆ ಚರ್ಚೆ ಮಾಡುತ್ತೇನೆ ಎಂದರು. ಅಭಿಮಾನಿಗಳು ಮತ್ತು ಕಾರ್ಯಕರ್ತರ ವಿಜಯೋತ್ಸವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ನಾನು ಜನಸಂಪರ್ಕ ಸಿಗದೆ ಇರೋದಕ್ಕೆ ಅವರು ಪ್ರೀತಿಯಿಂದ ಮಾತನಾಡಿಸಲು ತನ್ನ ಗ್ರಾಮಕ್ಕೆ ಬಂದಿದ್ದಾರೆ. ನಮ್ಮ ಕಾರ್ಯಕರ್ತರು ಇಲ್ಲಿ ಯಾವುದೇ ಮೆರವಣಿಗೆ ಮಾಡಿಲ್ಲ ಎಂದು ಭಾವುಕರಾಗಿ ಕಣ್ಣೀರು ಹಾಕಿದರು.
ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ರಾಸಾಯನಿಕಗಳ ಪೂರೈಕೆಗೆ ಗುತ್ತಿಗೆ ಪಡೆದವರಿಗೆ ಕಾರ್ಯಾದೇಶ ನೀಡಲು ಲಂಚ ಸ್ವೀಕರಿಸಿದ ಗಂಭೀರ ಆರೋಪದಲ್ಲಿ ಸಿಲುಕಿದ್ದ ಕೆಎಸ್‌ಡಿಎಲ್ ಅಧ್ಯಕ್ಷ ಮಾಡಾಳ್ ವಿರುಪಾಕ್ಷಪ್ಪಗೆ ಇಂದು ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ನ್ಯಾಯಮೂರ್ತಿ ಕೆ.ನಟರಾಜನ್ ವಿರುಪಾಕ್ಷಪ್ಪ ಅವರು ಅರ್ಜಿ ವಿಚಾರಣೆ ನಡೆಸಿದರು. ಆದೇಶದ ಪ್ರತಿ ಸಿಕ್ಕ 48 ಗಂಟೆಗಳಲ್ಲಿ ತನಿಖಾಧಿಕಾರಿಗಳ ಮುಂದೆ ಹಾಜರಾಗಬೇಕು. 5 ಲಕ್ಷ ರೂ. ಗಳ ಬಾಂಡ್ ನೀಡಬೇಕು. ಸಾಕ್ಷ್ಯಾಧಾರಗಳ ನಾಶಕ್ಕೆ ಮುಂದಾಗಬಾರದು ಎಂದು ನ್ಯಾಯಪೀಠ ಸೂಚನೆ ನೀಡಿ ವಿಚಾರಣೆಯನ್ನು ಮಾರ್ಚ್ 17ಕ್ಕೆ ಮುಂದೂಡಿದೆ.
ಪ್ರಕರಣದ ಹಿನ್ನೆಲೆ: ಚನ್ನಗಿರಿ ಕ್ಷೇತ್ರದ ಶಾಸಕರೂ ಆಗಿರುವ ಮಾಡಾಳ್ ವಿರುಪಾಕ್ಷಪ್ಪ ಕೆಎಸ್‌ಡಿಎಲ್‌ನ ಅಧ್ಯಕ್ಷರಾಗಿದ್ದರು. ಇದಕ್ಕೆ ಕಚ್ಚಾವಸ್ತು ಪೂರೈಕೆಗಾಗಿ ಗುತ್ತಿಗೆ ಪಡೆದಿದ್ದ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲು 80 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿರುವ ಆರೋಪವನ್ನು ಶಾಸಕರು ಎದುರಿಸುತ್ತಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿದ್ದ ಲೋಕಾಯುಕ್ತ ಪೊಲೀಸರು ಶಾಸಕರ ಪುತ್ರ ಮಾಡಾಳ್ ಪ್ರಶಾಂತ್ 40 ಲಕ್ಷ ರೂಪಾಯಿ ಲಂಚ ಸ್ವೀಕರಿಸುವ ವೇಳೆ ದಾಳಿ ಮಾಡಿದ್ದರು.
ಇದನ್ನೂ ಓದಿ: ವಿರೂಪಾಕ್ಷಪ್ಪನನ್ನು ಬಿಜೆಪಿ ಸರ್ಕಾರ ರಕ್ಷಣೆ ಮಾಡಲ್ಲ: ಮಾಜಿ ಸಿಎಂ ಸದಾನಂದ ಗೌಡ ಸ್ಪಷ್ಟನೆ