ದಾವಣಗೆರೆ : ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾದ ಹಿನ್ನೆಲೆ ಜಿಲ್ಲಾಡಳಿತ ಬಿಗಿ ಕ್ರಮಕ್ಕೆ ಮುಂದಾಗಿದ್ದು, ಅಗತ್ಯ ವಸ್ತುಗಳ ಖರೀದಿಗೆ ಬೆಳಿಗ್ಗೆ 7 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಅವಕಾಶ ನೀಡಲಾಗಿದೆ. ಉಳಿದಂತೆ ಎಲ್ಲಾ ಅಂಗಡಿಗಳು ಬಂದ್ ಇರಬೇಕೆಂದು ಕಟ್ಟಪ್ಪಣೆ ವಿಧಿಸಿದೆ.
ದಿನಸಿ, ಔಷಧ, ತರಕಾರಿ, ಮೊಟ್ಟೆ, ಹಾಲು, ಬೇಕರಿ ಹಾಗೂ ಕೃಷಿಗೆ ಸಂಬಂಧಿತ ಬೀಜ, ಗೊಬ್ಬರ ಸೇರಿದಂತೆ ಅಗತ್ಯ ವಸ್ತುಗಳನ್ನು ನಿಗದಿಪಡಿಸಿದ ಅವಧಿಯಲ್ಲಿ ಖರೀದಿಸಬೇಕು. ಬಳಿಕ ಎಲ್ಲಾ ಅಂಗಡಿಗಳನ್ನು ಬಂದ್ ಮಾಡಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ಸೂಚಿಸಿದ್ದಾರೆ.
ಮಧ್ಯಾಹ್ನ 1 ಗಂಟೆ ಬಳಿಕ ಯಾವುದೇ ವಾಹನ ಓಡಾಡುವಂತಿಲ್ಲ. ಜನರು ಮನೆಯಿಂದ ಹೊರ ಬರುವಂತಿಲ್ಲ. ಒಂದು ವೇಳೆ ಹೊರಗೆ ಬಂದರೆ ಕಠಿಣ ಕ್ರಮ ಅನಿವಾರ್ಯ. ಒಬ್ಬರಿಂದ ಒಬ್ಬರಿಗೆ ಸೋಂಕು ಹರಡುವುದನ್ನು ತಡೆಯಲು ಈ ಕ್ರಮ ತೆಗೆದುಕೊಳ್ಳಲಾಗಿದೆ. ಜನರು ಸಹಕರಿಸಬೇಕು ಎಂದು ಎಸ್ಪಿ ಹನುಮಂತರಾಯ ಮನವಿ ಮಾಡಿದ್ದಾರೆ.