ಹರಿಹರ : ಎಪಿಎಂಸಿಯ ಆವರಣದಲ್ಲಿ ಹಮಾಲರಿಗಾಗಿ ಶ್ರಮಿಕರ ಭವನವನ್ನು ನಿರ್ಮಾಣ ಮಾಡಲು ಖಾಲಿ ನಿವೇಶನಗಳನ್ನು ಮಂಜೂರು ಮಾಡುವಂತೆ ಒತ್ತಾಯಿಸಿ ಮಹಜೇನಹಳ್ಳಿ ಗ್ರಾಮದೇವತೆ ಹಮಾಲರ ಸಂಘವು ಎಪಿಎಂಸಿ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗೆ ಮನವಿ ಸಲ್ಲಿಸಿದರು.
ಸಂಘದ ಗೌರವಾಧ್ಯಕ್ಷ ಹೆಚ್.ಕೆ. ಕೊಟ್ರಪ್ಪ ಮಾತನಾಡಿ, ನಗರದ ಎಪಿಎಂಸಿ ಆವರಣದಲ್ಲಿ ಸುಮಾರು 100ಕ್ಕೂ ಹೆಚ್ಚು ಹಮಾಲರು ಕೆಲಸ ಮಾಡುತ್ತಿದ್ದಾರೆ. ನಮ್ಮ ಸಂಘದ ಹೋರಾಟ ಫಲವಾಗಿ ನಗರದಲ್ಲಿ 2 ಎಕರೆ ಜಮೀನಿನಲ್ಲಿ ನಿವೇಶನ ಮಂಜೂರಾಗಿದ್ದು, ಈಗಾಗಲೇ ಹಲವರು ಮನೆಗಳನ್ನು ನಿರ್ಮಾಣ ಮಾಡುತ್ತಿದ್ದಾರೆ ಎಂದರು.
ಹಮಾಲರು ಎಂದರೆ ಕೇವಲ ದುಡಿಮೆಗಾಗಿ ಅಲ್ಲ. ಅವರಿಗೂ ಸಂಸಾರ ಇರುತ್ತದೆ. ಹಾಗಾಗಿ ಎಪಿಎಂಸಿ ಆವರಣದಲ್ಲಿ ಒಂದು ಶ್ರಮಿಕ ಭವನ ನಿರ್ಮಾಣವಾದರೆ ಸಣ್ಣ-ಪುಟ್ಟ ಕಾರ್ಯಕ್ರಮಗಳು ಹಾಗೂ ಸಂಘದ ಕಾರ್ಯ ಚಟುವಟಿಕೆಯನ್ನು ನಡೆಸಲು ಅನುಕೂಲವಾಗುತ್ತದೆ. ಆದ ಕಾರಣ ಸುಮಾರು 50 ×100 ಅಳತೆಯ ಖಾಲಿ ನಿವೇಶನವನ್ನು ಮಂಜೂರು ಮಾಡಬೇಕೆಂದು ಅವರು ಒತ್ತಾಯಿಸಿದರು.
ಬಳಿಕ ಸಂಘದ ಅಧ್ಯಕ್ಷ ಎಕ್ಕೆಗೊಂದಿ ಹೆಚ್.ಬಿ ರುದ್ರೇಗೌಡ ಮಾತನಾಡಿ, ರಾಜ್ಯದ ಎಲ್ಲ ಜಿಲ್ಲಾ ಮತ್ತು ತಾಲೂಕು ಎಪಿಎಂಸಿ ಕೇಂದ್ರಗಳಲ್ಲಿ ಈಗಾಗಲೇ ಶ್ರಮಿಕರ ಭವನ ಇದೆ. ಆದಕಾರಣ ಕೂಡಲೇ ಹರಿಹರದಲ್ಲಿ ಶ್ರಮಿಕ ಭವನ ನಿರ್ಮಾಣಕ್ಕಾಗಿ ಖಾಲಿ ನಿವೇಶನ ಮಂಜೂರು ಮಾಡಬೇಂದು ಒತ್ತಾಯಿಸಿದರು. ಮನವಿ ಸ್ವೀಕರಿಸಿದ ಅಧ್ಯಕ್ಷ ಹನುಮಂತರೆಡ್ಡಿ ಮಾತನಾಡಿ, ಮುಂದಿನ ಸಭೆಯಲ್ಲಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳವ ಭರವಸೆ ನೀಡಿದರು.
ಈ ವೇಳೆ ಎಪಿಎಂಸಿ ಕಾರ್ಯದರ್ಶಿ ವಿದ್ಯಾಶ್ರೀ, ಹಮಾಲರ ಸಂಘದ ಪದಾಧಿಕಾರಿಗಳಾದ ನಾಗರಾಜ್ ಹೊಸಮನಿ, ಅಬ್ಬಾಸ್ ಅಲಿ, ರೈಹಮಾನ್ ಸಾಭ್, ಕೆ.ಬಸವರಾಜ್, ಮಂಜುನಾಥ್ ಇಂಗಳಗೊಂದಿ, ಗೋವಿಂದಪ್ಪ, ನಾಗರಾಜ್ ಮಾಗೋಡ್, ಶೇಖರ್, ಕರಿಂ ಸಾಭ್, ಪರಸಪ್ಪ ಹಾಗೂ ಮತ್ತಿತರರು ಹಾಜರಿದ್ದರು.