ದಾವಣಗೆರೆ: ಬಸವಣ್ಣ, ಪುರಂದರದಾಸರು, ಕುವೆಂಪು ಇಲ್ಲದ ಪಠ್ಯ ಪಠ್ಯಪುಸ್ತಕ ಅಲ್ವೇ ಅಲ್ಲ. ಹೆಡಗೇವಾರ್, ಸಾವರ್ಕರ್ ಸ್ವಾತಂತ್ರ್ಯಕ್ಕೆ ಕೊಟ್ಟ ಕೊಡುಗೆ ಏನು? ಎಂದು ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ ವಾಗ್ದಾಳಿ ನಡೆಸಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸಂಬಂಧಿಸಿದ ಪಠ್ಯಪುಸ್ತಕ ಸಮಿತಿಯಲ್ಲಿ ಎಂಟರಿಂದ ಹತ್ತು ಜನ ಬ್ರಾಹ್ಮಣರಿದ್ದಾರೆ. ನಾನು ಬ್ರಾಹ್ಮಣರನ್ನು ಟೀಕೆ ಮಾಡ್ತಿಲ್ಲ. ಪ್ರಗತಿಪರವಾಗಿ ಯೋಚಿಸುವವರಿದ್ದರೆ ಒಂದೊಳ್ಳೆ ಪಠ್ಯ ಹೊರತರಬಹುದು. ಬ್ರಿಟಿಷರ ಪರವಾಗಿದ್ದದವರು, ಯುವಕರಿಗೆ ಬ್ರಿಟಿಷ್ ಸೇನೆ ಸೇರಿ ಎಂದು ಹೇಳುತ್ತಿದ್ದವರ ಭಾಷಣವನ್ನು ಪಠ್ಯದಲ್ಲಿ ಸೇರಿಸುತ್ತಿದ್ದೀರೆಂದರೆ ಎಷ್ಟು ಅಧೋಗತಿಗಿಳಿದಿದ್ದೀರಿ ಅಂತ ಲೆಕ್ಕ ಹಾಕಿ ಎಂದರು.
ಯಾರು ಈ ರೋಹಿತ್ ಚಕ್ರತೀರ್ಥ? ಸಾಹಿತ್ಯ ಕ್ಷೇತ್ರಕ್ಕೆ ಅವರ ಕೊಡುಗೆಯೇನು? ಆರ್ಎಸ್ಎಸ್ ಪರ ಇರುವ ವ್ಯಕ್ತಿಯನ್ನು, ನಾಡಗೀತೆಯನ್ನು ಅವಹೇಳನ ಮಾಡಿದವನನ್ನು ನೀವು ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿರುವುದನ್ನು ನೀಡಿದರೆ ಎಷ್ಟು ಕೆಳಹಂತಕ್ಕೆ ಇಳಿದ್ದೀರಿ ಎಂದು ಗೊತ್ತಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ದಲಿತರಿಗೆ ಬಹಿಷ್ಕಾರ ಆರೋಪ: ಸಂಧಾನ ಸಭೆ ಮೂಲಕ ಸಮಸ್ಯೆ ಬಗೆಹರಿಸಿದ ಅಧಿಕಾರಿಗಳು
ಹಿಜಾಬ್ ಅವರ ಧರ್ಮದ ಆಚರಣೆ ಕಣ್ರೀ, ಸಿಖ್ಖರಿಗೆ ಪೇಠ ತೆಗೆದು ಶಾಲೆಗೆ ಬಾ ಅಂದ್ರೆ ಆಗುತ್ತಾ? ಹಿಜಾಬ್ ವಿವಾದದ ಮೂಲಕ ಮಕ್ಕಳ ಭವಿಷ್ಯ ಹಾಳು ಮಾಡುತ್ತಿದ್ದೀರಿ. ಆಜಾನ್ ಒಂದೂವರೆ ನಿಮಿಷಗಳ ಕಾಲ ಕೂಗುತ್ತಾರೆ, ಆದ್ರೆ ಸುಪ್ರಭಾತ ಎರಡು ಗಂಟೆ ಕೂಗ್ತಾರಲ್ವಾ, ಏನು ಮಾಡಬೇಕು? ಆಜಾನ್ ಅಂದರೆ ಎಲ್ಲರನ್ನೂ ಸುಖವಾಗಿಡು ಎಂದರ್ಥ. ಪ್ರಮೋದ್ ಮುತಾಲಿಕ್ ರಾಮಾಯಣ ಓದಿಕೊಂಡಿದ್ದಾನಾ? ನನ್ನ ಮುಂದೆ ಬರಲಿ ಚರ್ಚೆಗೆ ಸಿದ್ಧ ಎಂದು ಸವಾಲೆಸೆದರು.
ಎಂ.ಎಂ ಕಲ್ಬುರ್ಗಿ, ಗೌರಿ ಲಂಕೇಶ್ ಇಬ್ಬರೂ ಸತ್ಯ ಹೇಳಿದ್ದಕ್ಕಾಗಿ ಸಾವನ್ನಪ್ಪಿದ್ದಾರೆ. ಸತ್ಯಕ್ಕೆ ಮತ್ತೋರ್ವ ವ್ಯಕ್ತಿ ಹೋಗ್ತಾನೆ ಅಂದರೆ ಸಂತೋಷವೇ. ನಾನು ಮೂರನೇ ಹುತಾತ್ಮನಾಗಲು ಸಿದ್ಧ ಎಂದರು.