ದಾವಣಗೆರೆ: 40 ವರ್ಷಗಳಿಂದ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಏಕೈಕ ಅಂಗನವಾಡಿ ಕಾರ್ಯಕರ್ತೆಯರ ತರಬೇತಿ ಕೇಂದ್ರ ಇದೀಗ ಮುಚ್ಚುವ ಹಂತಕ್ಕೆ ತಲುಪಿದೆ. ಅದೆಷ್ಟೋ ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ನೀಡಿದ ಕೇಂದ್ರವನ್ನು ಮುಚ್ಚುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಯಾವುದೇ ಮುನ್ಸೂಚನೆ ನೀಡದೆ ಪತ್ರ ರವಾನಿಸಿದೆ. ಇಲಾಖೆಯ ನಡೆಯಿಂದ ಇಲ್ಲಿನ ಸಿಬ್ಬಂದಿ ಕಂಗಲಾಗಿದ್ದಾರೆ. ಈ ಕೇಂದ್ರದಲ್ಲಿರುವ ಸಿಬ್ಬಂದಿಗೆ ಕಳೆದ 43 ತಿಂಗಳಿಂದ ವೇತನ ನೀಡದೇ ಇರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಇಲಾಖೆಯ ವರ್ತನೆಯಿಂದ ಬೇಸತ್ತ ಸಿಬ್ಬಂದಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಕೇಳಿದ್ರೆ, ನೀವು ಸರಿಯಾಗಿ ಬ್ಯಾಚ್ಗಳನ್ನು ನಿರ್ವಹಿಸಿಲ್ಲ, ಅದಕ್ಕೆ ನಿಮಗೆ ವೇತನವನ್ನು ನೀಡಲು ಆಗುವುದಿಲ್ಲ ಎಂದು ಸಬೂಬು ಹೇಳಿದ್ದಾರೆ. ಆದರೆ, ತರಬೇತಿ ಕೇಂದ್ರದ ಸಿಬ್ಬಂದಿ ತರಬೇತಿಯ ಬ್ಯಾಚ್ಗಳನ್ನು ನಾವು ಮಾಡಲು ಬರುವುದಿಲ್ಲ, ಅದನ್ನು ಮೊದಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿಯೋಜನೆ ಮಾಡ್ಬೇಕು. ಬಳಿಕ ನಾವು ತರಬೇತಿ ನೀಡಬಹುದು ಎಂಬ ವಾದ ಸಿಬ್ಬಂದಿಯದ್ದು. ಇದಲ್ಲದೆ ಕಟ್ಟಡದ ಬಾಡಿಗೆಯನ್ನು ಕೂಡ ನೀಡಲು ಇಲಾಖೆ ನಿರಾಕರಿಸಿರುವುದು ಸಿಬ್ಬಂದಿ ಮೇಲೆ ಆಕಾಶವೇ ಕಳಚಿ ಬಿದ್ದಂತಾಗಿದೆ.
ರಾಜ್ಯ ಸರ್ಕಾರ ಈಗಾಗಲೇ ಈ ತರಬೇತಿ ಕೇಂದ್ರಗಳಿಗೆ ಗೇಟ್ಪಾಸ್ ನೀಡುವ ಮೂಲಕ ತಮ್ಮದೇ ಆದ ನಾಲ್ಕು ತರಬೇತಿ ಕೇಂದ್ರಗಳನ್ನು ಆರಂಭಿಸಿದೆ. ಅದರಲ್ಲಿ ಕೇವಲ ಮೂವರು ಅತಿಥಿ ಬೋಧಕ ಸಿಬ್ಬಂದಿಗೆ ಮಾತ್ರ ಕೆಲಸಕ್ಕೆ ಅವಕಾಶ ಕಲ್ಪಿಸಲಾಗಿದೆ. ಇನ್ನುಳಿದ 6 ಸಿಬ್ಬಂದಿ ಏನು ಮಾಡಬೇಕು ಎಂಬುದು ಉಳಿದವರ ಪ್ರಶ್ನೆ.
ಇದನ್ನೂ ಓದಿ: ರಾಹುಲ್ ಗಾಂಧಿಗೆ ಸಮನ್ಸ್ ನೀಡಿರುವುದು ರಾಜಕೀಯ ಪ್ರೇರಿತ: ಸತೀಶ್ ಜಾರಕಿಹೊಳಿ