ದಾವಣಗೆರೆ: ಕಳೆದ ಒಂದು ವಾರದಿಂದ ಜನರ ನಿದ್ದೆಗೆಡಿಸಿದ್ದ ಗಂಡು ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಚನ್ನಗಿರಿ ತಾಲೂಕಿನ ಜೋಳದಾಳ ಕುಕ್ಕುವಾಡೇಶ್ವರಿ ರಕ್ಷಿತಾರಣ್ಯ ವ್ಯಾಪ್ತಿಯ ಹೊಸಹಳ್ಳಿ ಗ್ರಾಮದ ಸಮೀಪ ಒಂದೂವರೆ ವರ್ಷದ ಚಿರತೆಯನ್ನು ಸೆರೆ ಹಿಡಿಯಲಾಗಿದೆ. ಹೊಸಹಳ್ಳಿ ಹಾಗೂ ಜೋಳದಾಳ ಸುತ್ತಮುತ್ತಲಿನ ಗ್ರಾಮಗಳಲ್ಲಿ ಚಿರತೆ ಓಡಾಟದಿಂದ ಜನರು ಭಯಭೀತರಾಗಿದ್ದರು. ಹೊಸಹಳ್ಳಿ ಗ್ರಾಮದ ನಾಗರಾಜಪ್ಪ ಎಂಬುವವರು ತೋಟಕ್ಕೆ ಹೋದ ವೇಳೆ ಚಿರತೆ ಕೂಗುವ ಶಬ್ದ ಕೇಳಿತ್ತು. ಕೂಡಲೇ ಅರಣ್ಯ ಇಲಾಖೆಗೆ ಅವರು ಮಾಹಿತಿ ನೀಡಿದ್ದರು.
ತಕ್ಷಣ ಡಿಎಫ್ಒ ಪೂವಯ್ಯ, ಎಸಿಎಫ್ ಸುಬ್ರಹ್ಮಣ್ಯ, ವಲಯ ಅರಣ್ಯಾಧಿಕಾರಿ ಆನಂದ್ ನಾಯ್ಕ್, ವೈದ್ಯಾಧಿಕಾರಿ ಡಾ. ವಿನಯ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಚಿರತೆ ಇರುವುದನ್ನು ಪತ್ತೆ ಹಚ್ಚಿದೆ. ಅರಿವಳಿಕೆ ನೀಡಿ ನಂತರ ಸೆರೆ ಹಿಡಿಯಲಾಗಿದೆ. ಚಿರತೆ ಹಿಂಬದಿಯ ಕಾಲುಗಳಿಗೆ ಗಾಯಗಳಾಗಿದ್ದು, ಎರಡು ದಿನಗಳಿಂದ ಆಹಾರ ಸಿಗದ ಕಾರಣ ಚಿರತೆ ಅಸ್ವಸ್ಥಗೊಂಡಿತ್ತು. ಶಿವಮೊಗ್ಗದ ತ್ಯಾವರೆಕೊಪ್ಪ ಅರಣ್ಯಧಾಮಕ್ಕೆ ಚಿರತೆ ರವಾನಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.