ದಾವಣಗೆರೆ: ಕೊರೊನಾ ವೈರಸ್ ಸೋಂಕಿನಿಂದ ಮೃತಪಟ್ಟ ಮುಸ್ಲಿಂ ಸಮುದಾಯದವರ ಶವ ಸಂಸ್ಕಾರಕ್ಕೆ ಖಬರಸ್ಥಾನಗಳಲ್ಲಿ ಅಡ್ಡಿಪಡಿಸುವವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ವಕ್ಪ್ ಮಂಡಳಿ ಎಚ್ಚರಿಸಿದೆ.
ರಾಜ್ಯದ ಹಲವೆಡೆ ಕೋವಿಡ್-19 ಸೋಂಕಿನಿಂದ ಸಾವಿಗೀಡಾದ ಮುಸ್ಲಿಂ ಬಾಂಧವರ ಶವಸಂಸ್ಕಾರಕ್ಕೆ ಖಬರಸ್ತಾನದಲ್ಲಿ ಸ್ಥಳ ನೀಡಲು ನಿರಾಕರಿಸುತ್ತಿರುವ ಮತ್ತು ಅನಗತ್ಯ ಕಿರುಕುಳ ನೀಡುತ್ತಿರುವ ವರದಿಗಳು ಬಂದಿವೆ. ಘನತೆಪೂರ್ಣ ಅಂತ್ಯಸಂಸ್ಕಾರ ಪ್ರತಿಯೊಬ್ಬ ಮೃತ ವ್ಯಕ್ತಿಯ ಹಕ್ಕು. ಈ ಹಕ್ಕಿಗೆ ಚ್ಯುತಿಯನ್ನುಂಟು ಮಾಡಲು ಯಾರಿಗೂ ಅವಕಾಶವಿಲ್ಲ ಎಂದು ಜಿಲ್ಲಾ ವಕ್ಪ್ ಸಲಹಾ ಸಮಿತಿ ಅಧ್ಯಕ್ಷ ಮೊಹಮ್ಮದ್ ಸಿರಾಜ್ ತಿಳಿಸಿದ್ದಾರೆ.
ಇನ್ನು ಮುಂದೆ ಜಿಲ್ಲೆಯ ಮುಸ್ಲಿಂ ಬಾಂಧವರ ಶವಸಂಸ್ಕಾರಕ್ಕೆ ತೊಂದರೆ ಉಂಟು ಮಾಡುವ, ಸ್ಥಳ ನಿರಾಕರಿಸುವ, ಯಾವುದೇ ವ್ಯಕ್ತಿ ಅಥವಾ ವಕ್ಪ್ ಅಥವಾ ವಕ್ಪ್ ಸಂಸ್ಥೆಗಳ ವ್ಯವಸ್ಥಾಪನಾ ಸಮಿತಿ, ಆಡಳಿತಾಧಿಕಾರಿ ವಿರುದ್ದ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.