ದಾವಣಗೆರೆ : ಕಳಪೆ ಮಟ್ಟದ ಫುಡ್ ಕಿಟ್ ನೀಡಿದ್ದಾರೆಂದು ಕಾರ್ಮಿಕ ಮಹಿಳೆ ತಹಶೀಲ್ದಾರ್ ವಿರುದ್ಧ ಆಕ್ರೋಶಗೊಂಡು ತರಾಟೆಗೆ ತೆಗೆದುಕೊಂಡಿರುವ ಘಟನೆ ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿ ನಡೆದಿದೆ.
ಕೇವಲ ಪ್ರಚಾರಕ್ಕಾಗಿ ಫುಡ್ ಕಿಟ್ ಕೊಡ್ಬೇಡಿ. ಕೊಟ್ರೇ ಒಳ್ಳೆ ಫುಡ್ ಕಿಟ್ ನೀಡಿ. ಇದರಲ್ಲಿ ಹುಳು ಇವೆ. ಇದನ್ನು ಹೇಗೆ ತಿನ್ನಬೇಕೆಂದು ಹೊನ್ನಾಳಿ ತಹಶೀಲ್ದಾರ್ ಬಸವರಾಜ್ ಅವರಿಗೆ ನಡು ರಸ್ತೆಯಲ್ಲೇ ಕಾರ್ಮಿಕ ಮಹಿಳೆಯೊಬ್ಬರು ತರಾಟೆಗೆ ತೆಗೆದುಕೊಂಡಿದ್ದಾರೆ.
ಕಾರ್ಮಿಕರಿಗಿಂದು ಫುಡ್ ಕಿಟ್ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. 7 ಸಾವಿರ ಫುಡ್ ಕಿಟ್ಗಳನ್ನು ಕಾರ್ಮಿಕರಿಗೆ ವಿತರಣೆ ಮಾಡಲಾಗಿದೆ. ಇವುಗಳು ಕಳಪೆಯಿಂದ ಕೂಡಿವೆ ಎಂದು ಕಾರ್ಮಿಕರು ಆಕ್ರೋಶ ಹೊರ ಹಾಕಿದ್ದಾರೆ.
ಇದೇ ವೇಳೆ ಮಹಿಳೆಯರ ಕೈಗೆ ಸಿಕ್ಕ ಹೊನ್ನಾಳಿ ತಹಶೀಲ್ದಾರ್ ಬಸವರಾಜು ಅವರನ್ನು ತರಾಟೆಗೆ ತೆಗೆದುಕೊಂಡಿರುವ ಘಟನೆ ಜರುಗಿದೆ. ಶಾಸಕ ರೇಣುಕಾಚಾರ್ಯ ಹಾಗೂ ಅಧಿಕಾರಿಗಳು ಕಾರ್ಮಿಕರಿಗೆ ಫುಡ್ ಕಿಟ್ ವಿತರಣೆ ಮಾಡಿದ್ದಾರೆ.
ಆದರೆ, ಕೊಟ್ಟ ಆಹಾರ ಕಳಪೆ ಮಟ್ಟದಿಂದ ಕೂಡಿದ್ದರಿಂದ ಆಕ್ರೋಶಗೊಂಡ ಕಾರ್ಮಿಕರು, ಚುನಾವಣೆ ವೇಳೆ ಬರುತ್ತೀರಾ? ಇದೀಗ ಇಂಥ ಕಳಪೆ ಆಹಾರ ಸಾಮಗ್ರಿ ನೀಡುತ್ತೀರಾ? ಎಂದು ತಹಶೀಲ್ದಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಓದಿ: 'ದಯವಿಟ್ಟು ನಮಗೂ ನಮ್ಮ ಕುಟುಂಬದವರೊಂದಿಗೆ ವಾಸಿಸಲು ಅವಕಾಶ ಮಾಡಿಕೊಡಿ'