ದಾವಣಗೆರೆ: ಕೊರೊನಾ ಸೋಂಕು ಪ್ರತಿದಿನ ಹೆಚ್ಚಾಗಲು ಜನರ ಬೇಜವಾಬ್ದಾರಿತನವೇ ಕಾರಣ ಎಂದು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.
ಹರಿಹರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರೊಡನೆ ಮಾತನಾಡಿದ ಸಚಿವ ಕೆ.ಎಸ್. ಈಶ್ವರಪ್ಪ, ಕೊರೊನಾ ನಿಯಂತ್ರಣಕ್ಕೆ ಬರುವ ಸಮಯದಲ್ಲಿ ದೆಹಲಿಯ ನಿಜಾಮುದ್ದೀನ್ ಘಟನೆ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಧರ್ಮಸಭೆಗೆ ಹೋಗಿಬಂದ ಶಂಕಿತರನ್ನು ಹೋಂ ಕ್ವಾರಂಟೈನ್ನಲ್ಲಿ ಇರಿಸಲಾಗಿದೆ. ಈ ಬಗ್ಗೆ ಸರ್ಕಾರ ಗಂಭೀರ ಕ್ರಮಕ್ಕೆ ಮುಂದಾಗಿದೆ. ಕೊರೊನಾ ದಿನೇ ದಿನೆ ಉಲ್ಬಣಗೊಳ್ಳಲು ಜನರ ಬೇಜವಾಬ್ದಾರಿತನವೇ ಕಾರಣ ಎಂದು ಅವರು ಬೇಸರ ವ್ಯಕ್ತಪಡಿಸಿದರು. ಕೊರೊನಾ ಬಗ್ಗೆ ಜಾಗೃತಿ ಮೂಡಿಸುತ್ತಿದ್ದ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಈಶ್ವರಪ್ಪ ತಿಳಿಸಿದ್ಧಾರೆ.
ಇನ್ನು ನಿಜಾಮುದ್ದೀನ್ ಪ್ರಕರಣಕ್ಕೆ ಸಂಬಂಧಿಸಿದಂತೆ ದಾವಣಗೆರೆಯಲ್ಲಿ ಗೊಂದಲವಿರುವುದರ ಬಗ್ಗೆ ಸ್ಪಷ್ಟನೆ ನೀಡಿದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹಾಗೂ ಎಸ್ಪಿ ಹನುಮಂತರಾಯ, ನಿನ್ನೆವರೆಗೂ ನಮ್ಮಲ್ಲಿ ಗೊಂದಲವಿತ್ತು. ಆದರೆ ಈಗ ಸರಿಯಾದ ಲೆಕ್ಕ ದೊರೆತಿದೆ. ದಾವಣಗೆರೆ ಜಿಲ್ಲೆಯಲ್ಲಿ 12 ನಿಜಾಮುದ್ದೀನ್ ಪ್ರಕರಣಗಳಿದ್ದವು. ಅವುಗಳಲ್ಲಿ ಒಬ್ಬರು ಹೊರ ರಾಜ್ಯದಲ್ಲಿದ್ದಾರೆ. ಉಳಿದ 11 ಜನರನ್ನು ಟ್ರೇಸ್ ಮಾಡಿದ್ದು ಅವರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.