ದಾವಣಗೆರೆ: ವಿಪಕ್ಷ ಸ್ಥಾನದಿಂದ ಕಿತ್ತು ಬಿಸಾಕಿದ ಮೇಲೆ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷ ಬಿಡ್ತಾರೆ ಎಂದು ದಾವಣಗೆರೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕನಾಗೇ ಇರುತ್ತಾರೆ ಎಂದು ಯಡಿಯೂರಪ್ಪ ಹೇಳಿದ್ದಾರೆ. ಯಡಿಯೂರಪ್ಪ ಹೇಳಿರುವುದು ಸುಳ್ಳು. ಕೆಲ ದಿನ ವಿಪಕ್ಷ ನಾಯಕನಾಗಿ ಇರಬಹುದು ಅಷ್ಟೆ. ವಿಪಕ್ಷ ನಾಯಕ ಸ್ಥಾನಕ್ಕೆ ಸಿದ್ದರಾಮಯ್ಯ ಅನ್ ಫಿಟ್. ಕಾಂಗ್ರೆಸ್ನಲ್ಲಿ ಒಳಜಗಳ ಶುರುವಾಗಿದೆ. ಸಿದ್ದರಾಮಯ್ಯ ಆ ಪಕ್ಷದಿಂದ ಹೊರ ಬರುತ್ತಾರೆ. ಇಲ್ಲ ಅಂದರೆ ಅವರನ್ನು ಕಿತ್ತು ಬಿಸಾಕುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.
ಕುಮಾರಸ್ವಾಮಿ ಸರ್ಕಾರ ಬೀಳಿಸೋಕೆ ಬಿಡುವುದಿಲ್ಲ ಎಂದಿರುವುದಕ್ಕೆ ಸ್ವಾಗತ ಕೋರುತ್ತೇನೆ. ಆದರೆ ಅವರ ಬೆಂಬಲವಿಲ್ಲದೆ ನಾವು ಪೂರ್ಣ ಅವಧಿ ಅಧಿಕಾರ ನಡೆಸುತ್ತೇವೆ. ಉಪ ಚುನಾವಣೆಯಲ್ಲಿ ಗೆದ್ದು, ಪೂರ್ಣ ಬಹುಮತದೊಂದಿಗೆ ಸರ್ಕಾರ ನಡೆಸುತ್ತೇವೆ ಎಂದು ಹೇಳಿದರು.
ಟಿಪ್ಪು ಜಯಂತಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಟಿಪ್ಪು ದೇಶಕ್ಕೋಸ್ಕರ ಏನು ಹೋರಾಟ ಮಾಡಿದ್ದಾನೆ? ಟಿಪ್ಪು ಹೆಸರು ಹೇಳಿ ಮುಸ್ಲಿಂರ ವೋಟ್ ಉಳಿಸಿಕೊಳ್ಳೋಕೆ ಸಿದ್ದರಾಮಯ್ಯ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ಈಶ್ವರಪ್ಪ ಕಿಡಿಕಾರಿದ್ದಾರೆ.
ಟಿಪ್ಪು ಜಯಂತಿ ಅವಶ್ಯಕತೆ ಇಲ್ಲ ಎಂದು ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ. ಕುತಂತ್ರ ರಾಜಕಾರಣ ಮಾಡಲು ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಟಿಪ್ಪು ಜಯಂತಿ ಬರದೇ ಇದ್ದಿದ್ದರೆ ಕುಟ್ಟಪ್ಪ ಬದುಕುಳಿಯುತ್ತಿದ್ದ. ಗಲಭೆಗಳು ಆಗುತ್ತಿರಲಿಲ್ಲ ಎಂದು ವಾಗ್ದಾಳಿ ನಡೆಸಿದರು.